ಮೈಕ್ರೋ ಫೈನಾನ್ಸ್‌ಗಳ ಶೋಷಣೆ: ರೈತ ಸಂಘದಿಂದ ಪ್ರತಿಭಟನೆ

Farmers Association Integration Committee protest Mandya
Published on

ಮಂಡ್ಯ: ಮೈಕ್ರೋ ಫೈನಾನ್ಸ್‌ಗಳ ಶೋಷಣೆ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ನೀತಿ ವಿರುದ್ಧ ನಗರದಲ್ಲಿ ರೈತ ಸಂಘ ಏಕೀಕರಣ ಸಮಿತಿ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಸರ್‌ಎಂವಿ ಪ್ರತಿಮೆ ಎದುರು ಜಮಾಯಿಸಿದ ಕಾರ್ಯಕರ್ತರು, ಮೈಕ್ರೋ ಫೈನಾನ್ಸ್ ವಿರುದ್ಧ ಘೋಷಣೆ ಕೂಗಿದರು. ಅಂತೆಯೇ ರೈತನೊಬ್ಬ ನೇಣು ಕುಣಿಕೆಗೆ ಕೊರಳೊಡ್ಡಿದ ಅಣಕು ಪ್ರದರ್ಶನದೊಂದಿಗೆ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಲಾಯಿತು. ಬಳಿಕ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ರವಾನಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯಿಂದ ಸಾಲದ ಪ್ರಮಾಣ ಹೆಚ್ಚಾಗುತ್ತಿದೆ. ರೈತರನ್ನು ಸಾಲ ಮುಕ್ತಗೊಳಿಸುವ ಯೋಜನೆ ರೂಪಿಸದ ಆಳುವ ಸರ್ಕಾರಗಳು ವಿಜ್ಞಾನ, ತಂತ್ರಜ್ಞಾನ, ಯಾಂತ್ರಿಕತೆ ಬಗ್ಗೆ ಮಾತನಾಡುತ್ತಾ ರೈತರ ಸ್ವಾವಲಂಬನೆಗೆ ಒತ್ತು ನೀಡದೆ ಉದ್ಯಮಿಗಳು ಕಾರ್ಪೊರೇಟ್ ಕುಳ ಹಾಗೂ ಶ್ರೀಮಂತರಿಗೆ ಉದಾರ ಸಾಲ ನೀಡುತ್ತಿವೆ. ಆದರೆ ರೈತರಿಗೆ ಸಾಲ ಸಿಗುತ್ತಿಲ್ಲ. ಬೆಳೆಯ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಕನಿಷ್ಟ ಬೆಂಬಲ ಬೆಲೆ ಖಾತರಿಯಾಗದೆ ಕೃಷಿ ಕ್ಷೇತ್ರ ಕಡೆಗಣನೆಯಾಗುತ್ತಿದ್ದು, ಕೃಷಿ ಕಾಯ್ದೆಗಳು ಮಾರಕವಾಗಿ ಪರಿಣಮಿಸಿದೆ. ಇಂತಹ ಒತ್ತಡದ ಜೀವನದಲ್ಲಿ ರೈತರು ಮಹಿಳೆಯರು ಮತ್ತು ಬಡವರು ಜೀವನೋಪಾಯಕ್ಕಾಗಿ ಖಾಸಗಿ ಮೈಕ್ರೋ ಫೈನಾನ್ಸ್‌ಗಳಿಂದ ಸಾಲ ಪಡೆಯುತ್ತಿದೆ. ಆದರೆ ಬಡ್ಡಿ ಚಕ್ರಬಡ್ಡಿಯಿಂದ ಸಾಲ ಮರುಪಾವತಿಸಲು ಸಾಧ್ಯವಾಗದೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳದಿಂದ ಊರು ತೊರೆಯುವ ಹಾಗೂ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಯುವ ನಾಯಕ ಪಚ್ಚೆ ನಂಜುಂಡಸ್ವಾಮಿ, ಇಂಡುವಾಳು ಚಂದ್ರಶೇಖರ್, ಕೆ.ನಾಗೇಂದ್ರಸ್ವಾಮಿ, ಎಸ್.ಮಂಜೇಶ್‌ಗೌಡ, ಅಣ್ಣೂರು ಮಹೇಂದ್ರ, ಶಿವಳ್ಳಿ ಚಂದ್ರಶೇಖರ್, ರಾಮಕೃಷ್ಣಯ್ಯ, ಸೀತಾರಾಮಯ್ಯ, ಕೆ.ಜಿ.ಉಮೇಶ್, ಕೀಳಘಟ್ಟ ನಂಜುಂಡಯ್ಯ, ಸೋ.ಶಿ.ಪ್ರಕಾಶ್, ಪ್ರಭುಲಿಂಗು, ಕೆ.ಪಿ.ಪುಟ್ಟಸ್ವಾಮಿ, ಗುಡಿದೊಡ್ಡಿ ಶಿವಲಿಂಗಯ್ಯ, ಕುದರಗುಂಡಿ ನಾಗರಾಜು, ಹಳುವಾಡಿ ಶ್ರೀನಿವಾಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net