

ದಾವಣಗೆರೆ: ಭತ್ತದ ಬೆಲೆ ನಷ್ಟ ಪರಿಹಾರಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಶನಿವಾರ ಪತ್ರ ಚಳವಳಿ ಹಮ್ಮಿಕೊಳ್ಳಲಾಗಿತ್ತು.
ಭತ್ತ ಬೆಳೆದ ರೈತರು ಮಾರುಕಟ್ಟೆಯಲ್ಲಿ ಬೆಲೆ ಸಿಗದೇ ತೀವ್ರ ಸಂಕಷ್ಟದಲ್ಲಿದ್ದಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಖರೀದಿದಾರರು ಒಂದು ಕ್ವಿಂಟಾಲ್ ಭತ್ತಕ್ಕೆ ಕೇವಲ 1400 ರಿಂದ 1500 ರೂ. ವರೆಗೆ ಬೆಲೆ ನೀಡಿ ಖರೀದಿಸುತ್ತಿದ್ದಾರೆ.
ಇದರಿಂದ ರೈತರಿಗೆ ಬಹಳ ನಷ್ಟವಾಗುತ್ತಿದೆ. ರಾಜ್ಯದಲ್ಲೂ ಕೂಡ ಕೇಂದ್ರ ಸರ್ಕಾರದ ಬೆಲೆ 1830 ರೂ. ಹಾಗೂ ರಾಜ್ಯ ಸರ್ಕಾರದಿಂದ 1500 ಸೇರಿದಂತೆ ಒಟ್ಟು 3,330 ರೂ. ಬೆಲೆ ಕೊಟ್ಟು ಖರೀದಿಸಿ ರೈತರ ಕುಟುಂಬಗಳನ್ನು ಕಷ್ಟದಿಂದ ಪಾರು ಮಾಡುವಂತೆ ರೈತರು ಪತ್ರದಲ್ಲಿ ಆಗ್ರಹಿಸಿದರು.
ಕೋಲ್ಕುಂಟೆ, ಕಾಡಜ್ಜಿ, ನಿಟ್ಟುವಳ್ಳಿ, ಆಲೂರು, ನಾಗನೂರು, ಕುಂದುವಾಡ, ಹಳೇಬಾತಿ, ದೊಡ್ಡಬಾತಿ, ಚಿಕ್ಕಬೂದಿಹಾಳು, ಮಾಗಾನಹಳ್ಳಿ, ರಾಂಪುರ, ನಾಗರಕಟ್ಟೆ, ಬೇತೂರು, ಚಿತ್ತಾನಹಳ್ಳಿ, ಕಲ್ಪನಹಳ್ಳಿ, ಕಕ್ಕರಗೊಳ್ಳ, ಪಾಮೇನಹಳ್ಳಿ, ಕುಕ್ಕುವಾಡ, ಕೈದಾಳೆ, ಹೂವಿನಮಡು ಮುಂತಾದ ಗ್ರಾಮಗಳಿಂದ ರೈತರು ಸಾಮೂಹಿಕವಾಗಿ ಸಿಎಂಗೆ ಪತ್ರ ಬರೆದರು.
ಮೆಕ್ಕೆಜೋಳ ಬೆಳೆದ ರೈತರಿಗೆ 5 ಸಾವಿರ ರೂ. ಧನಸಹಾಯ ನೀಡುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಇಷ್ಟು ಹಣ ಸಾಕಾಗುವುದಿಲ್ಲ. ಈ ಮೊತ್ತವನ್ನು ಕನಿಷ್ಠ 15 ಸಾವಿರ ರೂ.ಗಳಿಗೆ ಹೆಚ್ಚಿಸಬೇಕು. ಭತ್ತ ಬೆಳೆಗಾರರಿಗೆ 25 ಸಾವಿರ ರೂ. ಪರಿಹಾರ ನೀಡುವಂತೆ ಒತ್ತಾಯಿಸಿದರು.
ಸಂಘದ ರಾಜ್ಯ ಘಟಕದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್, ಮುಖಂಡರಾದ ಗುಮ್ಮನೂರು ಬಸವರಾಜ, ಕಾಡಜ್ಜಿ ಪ್ರಕಾಶ್, ಆಲೂರು ಪರಶುರಾಮ, ಪರಮೇಶ್, ಭಗತ್‌ಸಿಂಹ, ನಾಗೇಂದ್ರಪ್ಪ, ಅಂಜಿನಪ್ಪ, ಹನುಮಂತಪ್ಪ, ಹುಚ್ಚಂಗೆಪ್ಪ, ಶೇಖರಪ್ಪ ಗೌಡ್ರು ಭಾಗವಹಿಸಿದ್ದರು.