ಆ.13ರಂದು ನಗರದಲ್ಲಿ ಪ್ರತಿಭಟನೆ: ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಹೇಳಿಕೆ

Farmers Association District President Press Conference Mandya
Published on

ಮಂಡ್ಯ: ಬಹುರಾಷ್ಟ್ರೀಯ ಮತ್ತು ಕಾರ್ಪೋರೇಟ್ ಕಂಪನಿಗಳು ಕೃಷಿಯೆಡೆಗೆ ಮುಂದಾಗಿರುವುದು ರೈತ, ಕಾರ್ಮಿಕ, ದಲಿತ, ಮಹಿಳೆ, ವಿದ್ಯಾರ್ಥಿ, ಯುವಜನರ ಬದುಕಿಗೆ ಮಾರವಾಗಿದೆ. ಈ ಹಿನ್ನೆಲೆಯಲ್ಲಿ ಬಹುರಾಷ್ಟ್ರೀಯ ಮತ್ತು ಕಾರ್ಪೋರೇಟ್ ಕಂಪನಿಯನ್ನು ದೇಶದಿಂದ ಹೊರದೂಡಲು ಆಗ್ರಹಿಸಿ ಸಂಯುಕ್ತ ಹೋರಾಟ ಕರ್ನಾಟಕದ ವತಿಯಿಂದ ಆ.13ರಂದು ಬೆಳಗ್ಗೆ 11 ಗಂಟೆಗೆ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ತಿಳಿಸಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರನ್ನು ದೇಶದಿಂದ ತೊಲಗಿಸಲು ಭಾರತ ಬಿಟ್ಟು ತೊಲಗಿ ಹೋರಾಟ ನಡೆದಿತ್ತು. ಅದೇ ರೀತಿ ದೇಶಾದ್ಯಂತ ಬಹುರಾಷ್ಟ್ರೀಯ ಮತ್ತು ಕಾರ್ಪೋರೇಟ್ ಕಂಪನಿಗಳನ್ನು ದೇಶದಿಂದ ಹೊರಗೆ ದೂಡಲು ದೇಶಾದ್ಯಂತ ಬೃಹತ್ ಪ್ರತಿಭಟನೆ ನಡೆಸಲು ಕರೆ ನೀಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೇಂದ್ರ ಸರ್ಕಾರ ಅಮೆರಿಕಾದೊಂದಿಗೆ ಆರ್ಥಿಕ, ವಾಣಿಜ್ಯ, ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳಬಾರದು. ವಿದೇಶಿ ನೇರ ಹೂಡಿಕೆಗೆ ಕಡಿವಾಣ ಹಾಕಬೇಕು. ಎನ್‌ಪಿಎಫ್‌ಎಎಂ ಹಾಗೂ ಎನ್‌ಸಿಪಿ ರದ್ದುಪಡಿಸಬೇಕು. ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮೂಲಕ ಖಾಸಗಿ ಬಂಡವಾಳ ಉತ್ತೇಜಿಸುವ ನೀತಿ ಕೈಬಿಡಬೇಕು. ಎಲ್ಲ ಬೆಳೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಬೇಕು. ಸಮಗ್ರ ಸಾಲ ಮನ್ನಾ ಜಾರಿ, ಮೈಕ್ರೋಫೈನಾನ್ಸ್ ಕಿರುಕುಳ ತಡೆ ಸೇರಿದಂತೆ ವಿವಿದ ಬೇಡಿಕೆಗಳ ಈಡೇರಿಗೆ ಆಗ್ರಹಿಸಲಾಗುವುದು ಎಂದು ಹೇಳಿದರು.

ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಎನ್.ಎಲ್.ಭರತ್‌ರಾಜ್, ಕಾರ್ಯದರ್ಶಿ ಚಂದ್ರಶೇಖರ್, ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಸಹ ಕಾರ್ಯದರ್ಶಿ ಪ್ರೇಮಾ, ಸಿ.ಬಿ.ಚಂದ್ರಶೇಖರ್, ಅಣ್ಣಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net