ಪೊಲೀಸ್ ಠಾಣೆ ವಿಚಾರದಲ್ಲಿ ರಾಜಕಾರಣವಿಲ್ಲ: ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ ಸ್ಪಷ್ಟನೆ

A.L.Kempugowda
Published on

ಮಂಡ್ಯ: ಪಾಂಡವಪುರ ತಾಲೂಕು ಕ್ಯಾತನಹಳ್ಳಿ ಗ್ರಾಮದಲ್ಲಿ ಪೊಲೀಸ್ ಠಾಣೆ ಸ್ಥಾಪನೆ ವಿಚಾರದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ರಾಜಕಾರಣ ಮಾಡಿಲ್ಲ. ಹಲವು ವರ್ಷಗಳ ಪ್ರಯತ್ನದ ಫಲದಿಂದ ಆದೇಶ ದೊರೆತಿದೆ. ಆದರೆ ಗ್ರಾಮದಲ್ಲಿ ಠಾಣೆ ಪ್ರಾರಂಭದ ವಿಚಾರವನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಖಂಡಿಸಿರುವುದು ಸರಿಯಲ್ಲ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಹೇಳಿದರು.

ಕ್ಯಾತನಹಳ್ಳಿ ಪೊಲೀಸ್ ಠಾಣೆ ಪ್ರಾರಂಭಿಸುವ ಸಂಬಂಧ 2017ರಲ್ಲೇ ಪುಟ್ಟಣ್ಣಯ್ಯ ಅವರು ಮನವಿ ಸಲ್ಲಿಸಿದ್ದರು. ಹಂತ ಹಂತವಾಗಿ ನಡೆಸಿದ ಪ್ರಯತ್ನಗಳ ಫಲವಾಗಿ ಈಗ ಅನುಮೋದನೆ ದೊರೆತಿದೆ. ಕಳೆದ ಡಿಸೆಂಬರ್‌ನಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಗೃಹ ಸಚಿವರಿಗೆ ಮನವಿ ಸಲ್ಲಿಸಿದ ಮೇರೆಗೆ ಪರಿಶೀಲನೆ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಈ ನಡುವೆ ಕ್ಯಾತನಹಳ್ಳಿಗೆ ಮಂಜೂರಾಗಿದ್ದ ಪೊಲೀಸ್ ಠಾಣೆ ಆದೇಶವನ್ನು ಚಿನಕುರಳಿಗೆ ನೀಡುವಂತೆ ಕೇಂದ್ರ ಸಚಿವರ ಶಿಫಾರಸ್ಸಿನ ಮೇರೆಗೆ ತಿರುಚಲಾಗಿದೆ. ಇದು ಸರ್ಕಾರ ಮಟ್ಟದಲ್ಲಿ ಆಗಿರುವ ಲೋಪವಾಗಿದೆ. ಅದನ್ನು ಸರಿಪಡಿಸಿ ಮರು ಆದೇಶ ನೀಡಿದ್ದಾರೆ ಎಂದು ಸಮಜಾಯಿಷಿ ನೀಡಿದರು.

ಜಿಲ್ಲೆಯಲ್ಲಿ ಬೆಳೆಗಳಿಗೆ ನೀರು ಹರಿಸುವಂತೆ ನೀರಾವರಿ ಇಲಾಖೆಗೆ ಮನವಿ ಮಾಡಿದ್ದು, ಇನ್ನೂ 15 ದಿನಗಳವರೆಗೂ ನೀರು ಹರಿಸಲಾಗುವುದಿಲ್ಲ ಎಂಬ ಮಾಹಿತಿ ಹಂಚಿಕೊಂಡಿದ್ದಾರೆ. ಕೂಡಲೇ ರೈತರ ಬೆಳೆಗೆ ನೀರು ಹರಿಸಲು ಸರ್ಕಾರ ಮುಂದಾಗುವಂತೆ ಒತ್ತಾಯಿಸಿದರು.

ರೈತ ಸಂಘದ ಕೆ.ಟಿ.ಗೋವಿಂದೇಗೌಡ, ವಿಜಯ್‌ಕುಮಾರ್, ಮಂಜುನಾಥ್, ಶಂಕರ್, ಆನಂದ್, ರಘು, ರವೀಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net