

ರಾಯಚೂರು ಜಿಲ್ಲೆಯಲ್ಲಿ ಇಚೇಗೆ ಸುರಿದ ಮಳೆಯಿಂದ ರೈತರ ಬೆಳೆ ಸಂಪೂರ್ಣವಾಗಿ ನಾಶವಾಗಿದ್ದು, ಕೂಡಲೇ ಜಿಲ್ಲಾಡಳಿತ ಸಮೀಕ್ಷೆ ನಡೆಸಿ ಬೆಳೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ನಗರದ ಮಹಾನಗರ ಪಾಲಿಕೆ ಆಯುಕ್ತರ ಕಚೇರಿಮುಂದೆ ಸೋಮವಾರ ಪ್ರತಿಭಟನೆ ಮಾಡಿದರು.
ಕಳೆದ ವಾರ ಸತತವಾಗಿ ಬಿಡುವಿಲ್ಲದೇ ಸುರಿದ ಭಾರೀ ಮಳೆಗೆ ಜಿಲ್ಲೆಯ ರೈತರು ಹಾಕಿರುವ ಬೆಳೆಗಳಾದ ಹತ್ತಿ, ಸೂರ್ಯಕಾಂತಿ, ಈರುಳ್ಳಿ, ತೊಗರಿ, ಸಜ್ಜೆ, ನವಣೆ, ಭತ್ತ ಮತ್ತು ತರಕಾರಿ ಬೆಳೆಗಳು ಸಂಪೂರ್ಣ ಹಾನಿಯಾಗಿದ್ದು, ರೈತರು ಬೆಳೆದ ಬೆಳೆಗಳು ಮಾರಾಟಕ್ಕೆ ಬಾರದ ಮುಂಚೆಯೇ ಸಂಪೂರ್ಣ ಹಾನಿಯಾಗಿವೆ. ಇದರಿಂದ ಆರ್ಥಿಕವಾಗಿ ತೀರಾ ಸಂಕಷ್ಟಕ್ಕೆ ಒಳಗಾಗಿದ್ದಾರೆ. ತಕ್ಷಣವೇ ಕೃಷಿ ಇಲಾಖೆ, ಕಂದಾಯ ಇಲಾಖೆ ಮತ್ತು ತೋಟಗಾರಿಗೆ ಸಹಯೋಗದಲ್ಲಿ ಬೆಳೆ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು.
ಇದರ ಜತೆಗೆ ರೈತರ ಹೊಲಗಳಿಗೆ ಹೋಗುವ ಎಲ್ಲಾ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಅವುಗಳನ್ನು ಸರ್ಕಾರ ಸಂಬಂಧಪಟ್ಟ ಇಲಾಖೆಗಳಿಂದ ಸೂಕ್ತ ದುರಸ್ತಿ ಮಾಡಿಕೊಡಬೇಕು. ರಾಜ್ಯ ಸರ್ಕಾರವು ರೈತರು ಪಡೆದ ಸಹಕಾರಿ ಬ್ಯಾಂಕುಗಳಿಂದ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಿಂದ ಪಡೆದ ಸಾಲಗಳನ್ನು ಸಾಲಮನ್ನಾ ಮಾಡಬೇಕು.
ರೈತರು ಬೆಳೆ ವಿಮೆ ಮಾಡಿಸಿದ್ದು, ರೈತರಿಗೆ ಬೆಳೆ ಹಾನಿಯ ಪರಿಹಾರದ ಮೊತ್ತವನ್ನು ನೀಡುವಂತೆ ಕಂಪನಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು.ಮುಕ್ತ ಮಾರುಕಟ್ಟೆಯಲ್ಲಿ ರೈತರು ಬೆಳೆದ ಬೆಳೆಗಳಿಗೆ ಬೆಲೆ ಕಡಿಮೆಯಾದಾಗ ಸರ್ಕಾರ ನಿಗದಿಪಡಿಸಿದ ಎಂ.ಎಸ್.ಪಿ. ದರಕ್ಕೆ ರೈತರಿಂದ ಸಿ.ಸಿ.ಐ. ಖರೀದಿ ಕೇಂದ್ರಗಳನ್ನು ಸ್ಥಾಪಿಸಿ ಸರ್ಕಾರವೇ ಖರೀದಿಸಬೇಕು.
ನಾರಾಯಣಪುರ ಬಲದಂಡೆ ಕಾಲುವೆಗಳಲ್ಲಿ 95 ರಿಂದ 168 ಕಿ.ಮೀ. ವಿಸ್ತರಣೆಯಾಗಿದ್ದು, ಜಮೀನುಗಳಲ್ಲಿ ಈಗಾಗಲೇ ಕಾಲುವೆ ತೋಡಿದ್ದು ಆದರೆ ರೈತರಿಗೆ ಇದುವರೆಗೂ ಪರಿಹಾರದ ಹಣ ಬಂದಿರುವುದಿಲ್ಲ ಹಾಗೂ ಭೂಮಿಯನ್ನು ಕಳೆದುಕೊಂಡ ರೈತರಿಗೆ ಇದುವರೆಗೂ ನೀರು ಸಹ ಸಿಗದೇ ಸೌಲಭ್ಯ ವಂಚಿತರಾಗಿರುವುದರಿಂದ ತಕ್ಷಣವೇ ಕೃಷಿ ಜಮೀನಿಗೆ ಸೂಕ್ತ ಪರಿಹಾರ ನೀಡಿ, ಭೂಮಿ ಕಳೆದುಕೊಂಡ ರೈತರಿಗೆ ನೀರಿನ ಸೌಲಭ್ಯ ನೀಡಬೇಕೆಂದು ಒತ್ತಾಯ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗೌರವಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ,ಜಿಲ್ಲಾಧ್ಯಕ್ಷ ಅಬ್ದುಲ್ ಮಜಿದ್,ನರಸಪ್ಪ,ನರಸಿಂಗರಾವ್,ಕೆ.ವೀರೇಶ ಗೌಡ, ಬಾಪೂರು ತಿಮ್ಮಪ್ಪ, ದೇವಪ್ಪ, ಮಹೆಬೂಬ್,ರಮೇಶ,ಹುಲಿಗೇಪ್ಪ,ಇಬ್ರಾಹಿಂ,ಚಂದ್‌ಪಾಷ,ಈರಣ್ಣ ಸೇರಿ ಅನೇಕರು ಇದ್ದರು.