ರೈತ ಸಂಘ, ದಸಂಸ ಪ್ರತಿಭಟನೆ

HUN-JULY-2-6(RAITHA SANGHA STRIKE)
ಹುಣಸೂರು ತಾಲೂಕು ಚಲ್ಲಹಳ್ಳಿ ಗ್ರಾಪಂನಲ್ಲಿ ಗ್ರಾಮ ಠಾಣಾ ಜಾಗ ಒತ್ತುವರಿ ತೆರವುಗೊಳಿಸುವಂತೆ ಆಗ್ರಹಿಸಿ ರೈತ ಸಂಘದಿಂದ ತಹಸೀಲ್ದಾರ್ ಜೆ.ಮಂಜುನಾಥ್‌ಗೆ ಮನವಿ ಸಲ್ಲಿಸಲಾಯಿತು. ಹೊಸೂರು ಕುಮಾರ್, ಬೆಂಕಿಪುರ ಚಿಕ್ಕಣ್ಣ, ನಿಂಗರಾಜ ಮಲ್ಲಾಡಿ, ಧನಂಜಯ, ದೇವೇಂದ್ರ, ಗಜೇಂದ್ರ ಇದ್ದರು.
Published on

ಹುಣಸೂರು: ತಾಲೂಕಿನ ಬಿಳಿಕೆರೆ ಹೋಬಳಿ ಚಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ಠಾಣಾ ಜಾಗವನ್ನು ಬಂಡವಾಳ ಶಾಹಿಗಳು ಒತ್ತುವರಿ ಮಾಡಿಕೊಂಡಿದ್ದು ತಾಲೂಕು ಆಡಳಿತ ತೆರವುಗೊಳಿಸಬೇಕೆಂದು ಆಗ್ರಹಿಸಿ ರೈತಸಂಘ ಮತ್ತು ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿದರು.

ಚಲ್ಲಹಳ್ಳಿ ಗ್ರಾಪಂ ಮುಂಭಾಗ ಜಮಾಯಿಸಿದ ಸಂಘಟನೆಗಳ ಸದಸ್ಯರು ನ್ಯಾಯಕ್ಕಾಗಿ ಒತ್ತಾಯಿಸಿ ಘೋಷಣೆ ಕೂಗಿದರು. ರೈತ ಸಂಘದ ತಾಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ, ಬೆಂಕಿಪುರ ಅನ್ನರಾಯಪುರ ಗ್ರಾಮಗಳಲ್ಲಿ ಗ್ರಾಮಠಾಣಾ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಒತ್ತುವರಿ ತೆರವುಗೊಳಿಸುವಂತೆ ಒಂದು ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬರುತ್ತಿದ್ದರೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಅನ್ನರಾಯಪುರ ಗ್ರಾಮದ ಸರ್ವೇ ನಂಬರ್ 61-47ರ ಮಧ್ಯೆ ಸುಮಾರು 4 ಎಕರೆ ಸರ್ಕಾರಿ ಭೂಮಿ ಇದ್ದು, ಸದರಿ ಭೂಮಿಯ ಅರ್ಧ ಭಾಗದಲ್ಲಿ ಕಲ್ಲು ಬಂಡೆಗಳನ್ನು ಜೆಸಿಬಿ ಮೂಲಕ ತೆಗೆಸಿ ಟಿಪ್ಪರ್, ಟ್ರ್ಯಾಕ್ಟರ್ ಮೂಲಕ ತೋಟ ಹಾಗೂ ಬೇರೆ ಸ್ಥಳಾಂತರಕ್ಕೆ ಸಾಗಿಸಲಾಗುತ್ತಿದೆ. ಈ ಸಂಬಂಧ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಮನವಿ ಮಾಡಲಾಗಿದ್ದು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಜೆ.ಮಂಜುನಾಥ್ ಮನವಿ ಸ್ವೀಕರಿಸಿ ಮಾತನಾಡಿ, ಒತ್ತುವರಿ ತೆರವುಗೊಳಿಸುವುದಾಗಿ ಭರವಸೆ ನೀಡಿದರು. ಸ್ಥಳದಲ್ಲಿದ್ದ ತಾಪಂ ಕಾರ್ಯನಿರ್ವಹಣಾಧಿಕಾರಿ ಹೊಂಗಯ್ಯ ಒತ್ತುವರಿಯಾದ ಪ್ರದೇಶವನ್ನು ಅಳತೆ ಮಾಡಿಸಿ ನಿವೇಶನ ರಹಿತರಿಗೆ ಮಂಜೂರು ಮಾಡಲಾಗುವುದು ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ದಸಂಸ ಜಿಲ್ಲಾ ಸಂಚಾಲಕ ನಿಂಗರಾಜ್ ಮಲ್ಲಾಡಿ, ಪ್ರಧಾನ ಕಾರ್ಯದರ್ಶಿ ರಾಮೇಗೌಡ ಅಗ್ರಹಾರ, ಧನಂಜಯ ಕಿರಿಜಾಜಿ. ಸೋಮಣ್ಣ, ಈಶ್ವರ ಶ್ಯಾನುಭೋಗನಹಳ್ಳಿ, ಕುಚೇಲಗೌಡ ತಿಪ್ಪೂರು, ಚಾಮೇಗೌಡ ಹೊಸಪುರ, ರಾಮೇಗೌಡ ಹಳೇಪುರ, ಗ್ರಾಮ ಪಂಚಾಯಿತಿ ಸದಸ್ಯ ದೇವರಾಜು, ಪಿಡಿಒ ನವೀನ್, ಕಾರ್ಯದರ್ಶಿ ರಮೇಶ್, ಮಂಜುಳಾ, ದಸಂಸ ದೇವೇಂದ್ರ ಕುಳುವಾಡಿ, ಕಿರಿಜಾಜಿ ಗಜೇಂದ್ರ, ಬಲ್ಲೇನಹಳ್ಳಿ ಕೆಂಪರಾಜು, ಮಲ್ಲಿಕ್ ಪಾಷ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net