

ವಿಜಯಪುರ: ಮುಂಗಾರು ಬಿತ್ತನೆಗೆ ಈಗಾಗಲೇ ಸಿದ್ಧತೆ ನಡೆದಿದ್ದು, ಜಿಲ್ಲಾಡಳಿತ ರೈತರಿಗೆ ಸಕಾಲಕ್ಕೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಸುವುದರ ಜೊತೆಗೆ ಮಾರುಕಟ್ಟೆಯಲ್ಲಿ ಕಳಪೆ ಬಿತ್ತನೆ ಬೀಜ-ರಸಗೊಬ್ಬರ ಮತ್ತು ಕೀಟನಾಶಕ ಮಾರಾಟದ ಹಾವಳಿಗೆ ಕಡಿವಾಣ ಹಾಕಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಗುರುವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಜಿಲ್ಲೆಯ ಸಣ್ಣ ಸಣ್ಣ ಹೊಟೇಲ್, ಕಿರಾಣಿ ಅಂಗಡಿ, ಝರಾಕ್ಸ್ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದನ್ನು ತಡೆಯಬೇಕಿದ್ದ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ, ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರೂ ಕ್ರಮಗಳಾಗುತ್ತಿಲ್ಲ ಎಂದರು.
ಕಳಪೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಮಾರಾಟ ತಡೆಗೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಜಾಗೃತಿದಳ ಹೆಚ್ಚಿಗೆ ಮಾಡಿ, ಪ್ರತಿ ತಾಲೂಕಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಹಾಗೂ ಇಲಾಖೆಯ ಪರವಾನಿಗೆ ಪಡೆಯದೇ (ಪಿ.ಸಿ) ಅನಧಿಕೃತ ಮತ್ತು ಕಳಪೆ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಮಾರಾಟ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ತಾಲೂಕಾಧ್ಯಕ್ಷ ಮಹದೇವಪ್ಪ ತೇಲಿ ಮಾತನಾಡಿ, ರೈತಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ರಿಯಾಯಿತಿ ದರದಲ್ಲಿ ಕೊಡುವ ತಾಡಪಾಲ, ಸ್ಪಿಂಕ್ಲರ್ ಪೈಪ್, ಸ್ಪ್ರೇ ಪಂಪ್‌ಗಳು ಗುಣಮಟ್ಟದಿಂದ ಕೂಡಿಲ್ಲ, ಅಧಿಕಾರಿಗಳಿಗೆ ಕೇಳಿದರೆ ನಮಗೆ ಗೊತ್ತಿಲ್ಲ, ಮೇಲಿನಿಂದ ಹೀಗೆ ಬಂದಿವೆ ನಾವೇನು ಮಾಡುವುದು ಎನ್ನುತ್ತಿದ್ದಾರೆ. ಆದ್ದರಿಂದ ಒಟ್ಟಾರೆಯಾಗಿ ರೈತರಿಗೆ ಅನ್ಯಾಯವಾಗದ ಹಾಗೆ ನೋಡಿಕೊಳ್ಳಬೇಕೆಂದರು.
ಮುಖಂಡರಾದ ಪ್ರಕಾಶ ತೇಲಿ, ಬಸವರಾಜ ಗಾಣಗೇರ, ರಾಮಸಿಂಗ ರಜಪೂತ, ಬಸವರಾಜ ಹಡಪದ, ಅಶೋಕ ಕನ್ನೂರ, ರಾಜಾರಾಮಸಿಂಗ ಕೊಳುರ, ಬಸವರಾಜ ಗುದಳೆ, ರವಿ ಗೆರಡೆ, ಶ್ರೀಶೈಲ ಮಸೂತಿ, ರಾಜು ಕೇರೂರ, ಬಸವರಾಜ ಮಸೂತಿ, ರಾಜಾರಾಮಸಿಂಗ ಡೊಣೂರ, ಹಣಮಂತ ಶೇಗಣೂಶಿ, ಪರಸು ಚಿಕ್ಕಲಕಿ, ಬಸವರಾಜ ಕಲ್ಬುರ್ಗಿ, ಮಲುಕು ಅಕ್ಕಿಹುಗ್ಗಿ, ಮಲ್ಲನಗೌಡ ಬಿರಾದಾರ, ಸೋಮಯ್ಯ ದೊಡಮನಿ, ಮಹಾಂತೇಶ ಹತ್ತರಕಿ, ಭೀಮು ಚಿಮ್ಮಲಗಿ, ಮಹಾಂತೇಶ ಗೆರಡೆ ಮತ್ತಿತರರಿದ್ದರು.