

ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿರುವ ಪ್ರಾಥಮಿಕ ಪತ್ತಿನ ಸಹಕಾರ ಸಂಘದ ಮೂಲಕ ರೈತರಿಗೆ ಪೂರೈಸಬೇಕಾಗಿದ್ದ ಸುಮಾರು 79 ಟನ್ ಯೂರಿಯಾ ಗೊಬ್ಬರ ಕಾಳಸಂತೆ ಮೂಲಕ ಮಾರಾಟವಾಗಿದೆಂದು ಅಖಿಲ ಕರ್ನಾಟಕ ಭ್ರಷ್ಟಾಚಾರ ನಿರ್ಮೂಲನಾ ರೈತ ಸಂಘದ ಜಿಲ್ಲಾಧ್ಯಕ್ಷ ಸಾಜೀದ್ ಹುಸೇನ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಾಖಲೆಗಳ ಪ್ರಕಾರ ಸಂಘಕ್ಕೆ 79 ಟನ್ ಗೊಬ್ಬರ ಹಂಚಿಕೆಯಾಗಿತ್ತು. ಆದರೆ ಒಂದು ಚೀಲವೂ ಗೋದಾಮಿಗೆ ತಲುಪಿಲ್ಲ. ಸಂಘದ ಸದಸ್ಯರೂ ಸೇರಿದಂತೆ ಗ್ರಾಮದ ಯಾವುದೇ ರೈತರಿಗೆ ಮಾಹಿತಿ ನೀಡದೆ ಸಂಘದ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಸೇರಿಕೊಂಡು ಗೊಬ್ಬರವನ್ನು ಗುಪ್ತವಾಗಿ ಮಾರಾಟ ಮಾಡಿದ್ದಾರೆಂದು ಆರೋಪ ಮಾಡಿದರು.
ಅಂದಾಜು 2000 ಚೀಲಗಳಷ್ಟು ಗೊಬ್ಬರ ಕಳ್ಳಸಂತೆ ಮೂಲಕ ಹರಾಜು ಮಾಡಲ್ಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಸಾವಿರಾರು ಎಕರೆ ಜಮೀನಿನ ಬೆಳೆಗಳೆಲ್ಲ ಹಾಳಾಗುವ ಸ್ಥಿತಿಗೆ ತಲುಪಿವೆ. ಗೊಬ್ಬರದ ಲಭ್ಯತೆ ಇಲ್ಲದ ಕಾರಣ ಬಿತ್ತನೆ ಮಾಡಿದ ರೈತರು ಆತಂಕ ಸೃಷ್ಠಿಯಾಗಿದ್ದಾರೆ. ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಸಂದೀಪ, ಸಂಗಮೇಶ, ಪ್ರಸನ್ನ ಗೌಡ, ಭೀಮರೆಡ್ಡಿ, ಸಂಗಪ್ಪ ಗೌಡ ಇದ್ದರು.