

ಮಂಜುನಾಥ ಎಸ್. ಅಂಗಡಿ ಧಾರವಾಡ
ಕಳೆದ ಮೂರ‌್ನಾಲ್ಕು ದಿನಗಳಿಂದ ಜಿಲ್ಲಾದ್ಯಂತ ಮಳೆ ಬಿಡದಂತೆ ಸುರಿಯುತ್ತಿದೆ. 'ಮಘಾ' ಮಳೆಯ ಆರ್ಭಟಕ್ಕೆ ಜಮೀನುಗಳಲ್ಲಿ ನೀರು ನಿಲ್ಲುತ್ತಿದ್ದು, ಬೆಳೆಗಳಿಗೆ ಹಾನಿಯಾಗುವ ಲಕ್ಷಣಗಳಿವೆ. ಕೆಲವೆಡೆ ಹೆಸರು ಬೆಳೆ ಒಕ್ಕಣೆಗೆ ಬಂದಿದ್ದು, ರೈತರು ಜಮೀನಿಗೆ ಹೋಗಲಾರದ ಪರಿಸ್ಥಿತಿ ನಿರ್ಮಾಣವಾಗಿದೆ.
ಆ. 2ರಿಂದ ಆರಂಭವಾಗಿದ್ದ ಆಶ್ಲೇಷ ಮಳೆ ಆಗಾಗ ಸುರಿಯಿತಾದರೂ ಹಾನಿಯಾಗಲಿಲ್ಲ. ಆಶ್ಲೇಷ ಅಂತಿಮ ಚರಣದ ಮಳೆ ಹಿಡಿದಿದ್ದು ಬಿಡಲಿಲ್ಲ. ಆ. 16ರಿಂದ ಮಘಾ ಮಳೆ ಆರಂಭವಾಗಿದ್ದು, ನಿರಂತರವಾಗಿ ಸುರಿಯುತ್ತಲೇ ಇದೆ. 12ರಿಂದ 19ರವರೆಗೆ 26 ಮಿ.ಮೀ. ಮಳೆ ನಿರೀಕ್ಷಿಸಲಾಗಿತ್ತಾದರೂ 61 ಮಿ.ಮೀ. ವಾಸ್ತವಿಕ ಮಳೆಯಾಗಿದೆ. ಈ ಅವಧಿಯಲ್ಲಿ ಶೇ. 132ರಷ್ಟು ಮಳೆ ಹೆಚ್ಚಳವಾಗಿದೆ. ಪರಿಣಾಮ ಮುಂಜಾಗ್ರತೆ ಕ್ರಮವಾಗಿ 19 ಹಾಗೂ 20ರಂದು ಶಾಲೆ, ಕಾಲೇಜುಗಳಿಗೆ ರಜೆ ೋಷಿಸಲಾಯಿತು.
ಮೊಳಕೆಯೊಡೆಯುತ್ತಿರುವ ಹೆಸರು:
ಶೇಂಗಾ, ಸೋಯಾಬೀನ್, ಉದ್ದು, ಹೆಸರು, ಭತ್ತ, ಆಲೂಗಡ್ಡೆ, ಹತ್ತಿ ಜಿಲ್ಲೆಯ ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳು. ನಿರಂತರ ಮಳೆಯಿಂದ ಕೃಷಿ ಚಟುವಟಿಕೆಗಳು ಸಂಪೂರ್ಣ ಕುಂಠಿತಗೊಂಡಿವೆ. ಧಾರವಾಡ, ನವಲಗುಂದ ಭಾಗದಲ್ಲಿ ಹೆಸರು, ಉದ್ದು ಬೆಳೆ ಕೈಗೆ ಬಂದಿದ್ದು, ಕಟಾವು ಕೆಲಸ ಸಾಧ್ಯವಾಗುತ್ತಿಲ್ಲ. ಹೆಸರು ಕಾಯಿ ಬೆಳೆಗಳಲ್ಲೇ ಮೊಳಕೆಯೊಡೆಯುತ್ತಿದ್ದು, ರೈತರ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಈ ವರ್ಷದ ಮುಂಗಾರು ಆರಂಭದಲ್ಲೂ ಜಿಲ್ಲೆಯ ರೈತರು ಅಪಾರ ಹಾನಿ ಅನುಭವಿಸಿದ್ದಾರೆ. ಜೂನ್‌ನಲ್ಲಿ ಸುರಿದ ಭಾರಿ ಮಳೆಗೆ ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ, ಕುಂದಗೋಳ ತಾಲೂಕುಗಳ ಬೆಣ್ಣಿ ಹಳ್ಳ, ತುಪ್ಪರಿ ಹಳ್ಳ ಮತ್ತು ಉಪ ಹಳ್ಳಗಳ ಅಚ್ಚುಕಟ್ಟು ಪ್ರದೇಶದಲ್ಲಿ ಪ್ರವಾಹ ಉಂಟಾಗಿತ್ತು. ಬಿತ್ತನೆಯಾಗಿ ಮೊಳಕೆ ಹಂತದಲ್ಲಿದ್ದ ಬೆಳೆ ಸಂಪೂರ್ಣ ಹಳ್ಳ ಸೇರಿತ್ತು. ಮಳೆ ಬಿಡುವು ಕೊಟ್ಟ ನಂತರ ರೈತರು ಮರುಬಿತ್ತನೆ ಮಾಡಿದ್ದರು. ಈ ಭಾಗದಲ್ಲಿ ಜಿಲ್ಲಾಡಳಿತದಿಂದ ಜಂಟಿ ಸರ್ವೇ ಕಾರ್ಯ ಕೈಗೊಂಡು 12,977 ಹೆಕ್ಟೇರ್ ಬಿತ್ತನೆ ಪ್ರದೇಶ ಹಾನಿಯಾಗಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಆದರೆ, ಸಂತ್ರಸ್ತ ರೈತರಿಗೆ ಈವರೆಗೂ ಹಾನಿ ಪರಿಹಾರ ಸಿಕ್ಕಿಲ್ಲ.