

ರವಿ ಬೆಟ್ಟಸೋಗೆ ಅರಕಲಗೂಡು
ತಾಲೂಕಿನಲ್ಲಿ ಇನ್ನೂ ಮಳೆ ಸುರಿಯದೆ ಬೇಸಿಗೆ ಬಿಸಿಲ ತಾಪಕ್ಕೆ ಅಂತರ್ಜಲ ಬತ್ತಿದ್ದು, ತೋಟಗಾರಿಕೆ ಬೆಳೆಗಳು ಒಣಗಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ.
ರೈತರಿಗೆ ದೀರ್ಘಾವಧಿ ಆದಾಯ ತರುವ ಕಾಫಿ, ತೆಂಗು, ಅಡಕೆ ಹಾಗೂ ವೀಳ್ಯದೆಲೆ, ಮೆಣಸು ಸೇರಿದಂತೆ ತೋಟಗಾರಿಕೆ ಬೆಳೆಗಳು ಸುಡುಬಿಸಿಲಿಗೆ ಸಿಲುಕಿ ನೀರಿನಲ್ಲದೆ ನಲುಗುತ್ತಿವೆ. ಮಳೆ ಇಲ್ಲದೆ ದಿನೇದಿನೆ ಏರಿಕೆಯಾಗುತ್ತಿರುವ ತಾಪಮಾನದ ಪರಿಣಾಮ ಅಂತರ್ಜಲ ಮಟ್ಟ ಪಾತಾಳ ತಲುಪಿದೆ. ಪರಿಣಾಮವಾಗಿ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ.
ತಾಲೂಕಿನಲ್ಲಿ 70 ಸಾವಿರಕ್ಕೂ ಅಧಿಕ ಹೆಕ್ಟೇರ್ ಕೃಷಿ ಪ್ರದೇಶವಿದ್ದು, ತಂಬಾಕು ಸೇರಿದಂತೆ ಇತರೆ ಬೆಳೆಗಳನ್ನು 50 ಸಾವಿರ ಹೆಕ್ಟೇರ್‌ನಲ್ಲಿ ಮುಂಗಾರು ಹಂಗಾಮಿನಲ್ಲಿ ಕೈಗೊಳ್ಳಲಾಗುತ್ತಿದೆ. ಬೇಸಿಗೆಯಲ್ಲಿ ತೋಟಗಾರಿಕೆ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳಲು ಈ ಬಾರಿ ಬರದ ಹಿನ್ನೆಲೆಯಲ್ಲಿ ಸಂಕಷ್ಟ ಎದುರಾಗಿದೆ. ಹಿಂದಿನ ಸಾಲಿನ ಮಳೆಯ ಪ್ರಮಾಣವನ್ನು ಅವಲೋಕಿಸಿದರೆ ಸಾಮಾನ್ಯವಾಗಿ ಯುಗಾದಿ ಮುನ್ನ ಹಾಗೂ ನಂತರದ ದಿನಗಳಲ್ಲಿ ಮುಂಗಾರು ಪೂರ್ವ ಮಳೆ ಬೀಳುತ್ತಿತ್ತು. ಇದರಿಂದ ರೈತರಿಗೆ ಬೇಸಿಗೆ ಸಮಯದಲ್ಲಿ ಭೂಮಿಯ ಉಳುಮೆ ಸೇರಿದಂತೆ ದ್ವಿದಳ ಧಾನ್ಯ ಬೆಳೆ, ತೋಟಗಾರಿಕೆ ಬೆಳೆಗಳ ರಕ್ಷಣೆಗೆ ಅನುಕೂಲವಾಗುತ್ತಿತ್ತು. ಆದರೆ ಈ ಬಾರಿ ಮಳೆ ಮಾಯವಾಗಿದ್ದು, ತೋಟಗಳನ್ನು ಉಳಿಸಿಕೊಳ್ಳಲು ರೈತರು ಹೆಣಗುವಂತಾಗಿದೆ.
ತಾಲೂಕಿನಲ್ಲಿ 4 ಸಾವಿರ ಹೆಕ್ಟೇರ್ ಅಡಕೆ, 2500 ಹೆಕ್ಟೇರ್ ತೆಂಗು, ಒಂದು ಸಾವಿರ ಹೆಕ್ಟೇರ್‌ನಲ್ಲಿ ಶುಂಠಿ ಬೆಳೆ ಬೆಳೆಯಲಾಗಿದೆ. ಇದರ ನಡುವೆ ಹಸಿ ತರಕಾರಿ ಬೆಳೆಗಳು, ಮೆಕ್ಕೆಜೋಳ ಸೇರಿದಂತೆ ಅರೆ ನೀರಾವರಿ ಬೆಳೆಗಳನ್ನು ರೈತರು ಕೈಗೊಂಡಿದ್ದಾರೆ. ಕೆರೆಗಳಲ್ಲಿ ನೀರು ಬತ್ತುತ್ತಿರುವ ಹಿನ್ನೆಲೆಯಲ್ಲಿ ಅಚ್ಚುಕಟ್ಟಿನ ತೋಟಗಾರಿಕೆ ಬೆಳೆಗಳಿಗೆ ನೀರು ಒದಗಿಸುತ್ತಿದ್ದ ಬೋರ್‌ವೆಲ್‌ಗಳಲ್ಲಿ ನೀರಿನ ಲಭ್ಯತೆ ಇಳಿಮುಖವಾಗಿದೆ. ಹಲವು ಕೊಳವೆ ಬಾವಿಗಳಲ್ಲಿ ಸಂಪೂರ್ಣ ನೀರು ಬತ್ತಿದ್ದು, ಪರಿಣಾಮ ಬೆಳೆಗಳನ್ನು ಉಳಿಸಿಕೊಳ್ಳಲು ಹೊಸ ಕೊಳವೆ ಬಾವಿ ಕೊರೆಸಲು ರೈತರು ಮುಂದಾಗುತ್ತಿರುವುದು ಕಂಡುಬಂದಿದೆ. ಇದರಿಂದ ಅಕ್ಕಪಕ್ಕದಲ್ಲಿನ ಕೊಳವೆ ಬಾವಿಗಳಲ್ಲಿಯೂ ಸಹ ನೀರು ಕುಂಠಿತಗೊಳ್ಳುತ್ತಿರುವ ಪರಿಣಾಮ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತಿದೆ.
ನಾಶವಾಗುತ್ತಿರುವ ಫಸಲು: ತಾಲೂಕಿನ ಗಡಿಭಾಗ ಮಲ್ಲಿಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚಾಗಿ ಕಾಫಿ, ಏಲಕ್ಕಿ, ಕಾಳುಮೆಣಸು ಹಾಗೂ ಅಡಕೆ ತೋಟ ಕೃಷಿಯನ್ನು ರೈತರು ಕೈಗೊಂಡಿದ್ದಾರೆ. ತಾಲೂಕಿನ ಕೊಣನೂರು, ರಾಮನಾಥಪುರ, ದೊಡ್ಡಮಗ್ಗೆ, ಕಸಬಾ ಹೋಬಳಿ ವ್ಯಾಪ್ತಿಯಲ್ಲಿಯೂ ತೋಟಗಾರಿಕೆ ಬೆಳೆಗಳಾದ ಅಡಕೆ, ತೆಂಗು, ರೇಷ್ಮೆ ಬೆಳೆಗಳನ್ನು ಬೆಳೆಯಲಾಗಿದೆ. ಈ ಬೆಳೆಗಳು ಹೆಚ್ಚಾಗಿ ನೀರನ್ನು ಅವಲಂಬಿಸಿವೆ. ಕೆರೆ, ಬೋರ್‌ವೆಲ್‌ಗಳಲ್ಲಿ ನೀರು ಇಲ್ಲದ ಪರಿಣಾಮ ಬೆಳೆಗಳು ಒಣಗಲು ಕಾರಣವಾಗುತ್ತಿದೆ. ಇದರಿಂದ ಹೊಸ ಕೊಳವೆ ಬಾವಿ ಕೊರೆಸಲು ಮುಂದಾದರೂ ಕೂಡ ನೀರು 800 ಅಡಿಗೆ ಸಿಗುತ್ತಿರುವ ಹಿನ್ನೆಲೆಯಲ್ಲಿ ಇಡೀ ಬೆಳೆಯನ್ನು ಏಕ ಕಾಲದಲ್ಲಿ ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಿಸಿಲಿನ ತಾಪಮಾನಕ್ಕೆ ಈಗಾಗಲೇ ಹತ್ತಾರು ಕಾಫಿ, ಅಡಕೆ ತೋಟಗಳು ಒಣಗತೊಡಗಿದ್ದು, ಮುಂದಿನ ದಿನಗಳಲ್ಲಿ ಮಳೆ ಬೀಳದೆ ಹೋದರೆ ಮತ್ತಷ್ಟು ಅಡಕೆ, ಕಾಫಿ ತೋಟಗಳು ಬಿಸಿಲಿನ ತಾಪಕ್ಕೆ ಬಲಿಯಾಗಿ ನಾಶವಾಗುವ ಆತಂಕ ರೈತರಲ್ಲಿ ಮನೆ ಮಾಡಿದೆ.
ಶುಂಠಿಗೂ ಕುತ್ತು: ಶುಂಠಿಗೆ ಉತ್ತಮ ದರ ದೊರಕಿದ ಹಿನ್ನೆಲೆಯಲ್ಲಿ ಈ ಬಾರಿ ತಾಲೂಕಿನಲ್ಲಿ ಶುಂಠಿ ಬಿತ್ತನೆ ಪ್ರಮಾಣ ಅಧಿಕವಾಗಿ ವಿಸ್ತರಣೆಗೊಂಡಿದೆ. ಆದರೆ ಮಳೆಯ ಮುನಿಸಿ ಶುಂಠಿ ಬೆಳೆ ಬೆಳೆಯಲು ಸಹ ಆಗದ ಪರಿಸ್ಥಿತಿ ನಿರ್ಮಿಸಿದರು.
ಕಳೆದ ನಾಲ್ಕೈದು ವರ್ಷಗಳ ಹಿಂದೆ ಶುಂಠಿ ಬೆಲೆ ಕುಸಿತಗೊಂಡ ಪರಿಣಾಮ ತಾಲೂಕಿನಲ್ಲಿ ಶುಂಠಿ ಬೆಳೆ ಪ್ರದೇಶ ಕುಂಠಿತಗೊಂಡಿತ್ತು. ಕಳೆದ ಎರಡು ವರ್ಷಗಳಿಂದ ನಿರೀಕ್ಷೆಗೂ ಮೀರಿ ಬೆಲೆ ದೊರೆಯುತ್ತಿರುವ ಪರಿಣಾಮ ಶುಂಠಿ ಬೆಳೆ ಪ್ರದೇಶ ಸಾವಿರ ಹೆಕ್ಟೇರ್ ಗಡಿಯನ್ನು ದಾಟಿದೆ. ಇದರಿಂದ ಕೊಳವೆ ಬಾವಿಗಳನ್ನು ಹೊಸದಾಗಿ ಕೊರೆಸುವುದು ನಿತ್ಯ ಕಂಡುಬರುತ್ತಿದೆ. ವಿಶೇಷವಾಗಿ ರೈತರು ಶುಂಠಿ ಬೆಳೆ ಕೈಗೊಳ್ಳುವ ವೇಳೆ ಅಂತರ ಬೇಸಾಯವಾಗಿ ಅಡಕೆ, ತೆಂಗು ಕೃಷಿಯನ್ನು ಕೈಗೊಳ್ಳುವುದು ವಾಡಿಕೆ. ಮಳೆ ಆಶ್ರಯದ ಭೂಮಿ ಈಗ ಶುಂಠಿ ಬೆಳೆಯನ್ನು ಕೈಗೊಳ್ಳುವ ಚಿನ್ನದ ಭೂಮಿಯಾಗಿ ಪರಿವರ್ತನೆಗೊಂಡಿದೆ. ದುರಾದೃಷ್ಟವಶಾತ್ ರೈತರ ಆಸೆಯ ಬೆಳೆ ಶುಂಠಿಗೂ ಮಳೆ ಕೊರತೆ ಶಾಪವಾಗಿ ಪರಿಣಮಿಸಿದೆ. ಇತ್ತ ಅಂತರ್ಜಲವೂ ಬತ್ತಿರುವುದರಿಂದ ಬೆಳೆ ರಕ್ಷಣೆ ಮಾಡಿಕೊಳ್ಳಲಾರದೆ ಬೆಳೆಗಾರರು ಹೈರಾಣಾಗಿದ್ದಾರೆ. ಸದ್ಯದಲ್ಲೇ ಮಳೆ ಬಾರದಿದ್ದರೆ ಬೆಳೆಗಳನ್ನು ಉಳಿಸಿಕೊಳ್ಳಲು ಕಷ್ಟಕರವಾಗಲಿದೆ ಎನ್ನುತ್ತಾರೆ ಅನ್ನದಾತರು.
ಈ ಬಾರಿ ಏಪ್ರಿಲ್ ತಿಂಗಳು ಕಳೆಯುತ್ತಾ ಬಂದರೂ ಮಳೆ ಸುರಿಯುತ್ತಿಲ್ಲ. ತಾಲೂಕಿನಲ್ಲಿ ಬರದ ಛಾಯೆ ಎದುರಾಗಿದ್ದು, ದೊಡ್ಡಪ್ರಮಾಣದಲ್ಲಿ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚಿದೆ. ಈ ಹಿಂದಿನ ಅವಧಿಯಲ್ಲಿ ಹಿಂಗಾರು ಮಳೆ ಅಬ್ಬರ ಕಂಡುಬರುತ್ತಿತ್ತು. ಈ ಬಾರಿ ಜನವರಿ ನಂತರ ಮಳೆ ಬೀಳಲಿಲ್ಲ. ಇದರಿಂದ ತೋಟಗಾರಿಕೆ ಬೆಳೆಗಳು, ಅರೆ ನೀರಾವರಿ ಬೆಳೆಗಳನ್ನು ಕೈಗೊಳ್ಳಲು ರೈತರು ಪರಿತಪಿಸುವಂತಾಗಿದೆ.
ರಾಜೇಶ್, ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ, ಅರಕಲಗೂಡು.
ಮಳೆ ಇಲ್ಲದೆ ಅಡಕೆ, ತೆಂಗು ಸೇರಿದಂತೆ ತೋಟಗಾರಿಕೆ ಬೆಳೆಗಳು ಒಣಗಿ ನೆಲಕಚ್ಚುತ್ತಿವೆ. ಬಿಸಿಲಿನ ತಾಪಕ್ಕೆ ಅಂತರ್ಜಲ ಪಾತಾಳ ಸೇರಿದೆ. ಹೊಸದಾಗಿ ಬೋರ್‌ವೆಲ್ ಕೊರೆಯಿಸಿದರೂ ನೀರು ಸಿಗುತ್ತಿಲ್ಲ. ವರುಣನ ಮುನಿಸಿನಿಂದ ಬೆಳೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದೆ ದಿಕ್ಕು ತೋಚದಾಗಿದೆ.
ರೈತ ಶ್ರೀರಾಂಪುರ, ವೆಂಕಟೇಶ್