ಫೆಂಗಲ್ ಅಬ್ಬರಕ್ಕೆ ರೈತರು ಕಂಗಾಲು

4 SDP 4
Published on

ಸಿದ್ದಾಪುರ: ಫೆಂಗಲ್ ಚಂಡಮಾರುತದ ಅಬ್ಬರದಿಂದ ಕಳೆದ ಎರಡು ದಿನದಿಂದ ತಾಲೂಕಿನಾದ್ಯಂತ ಸುರಿದ ಮಳೆಗೆ ಅಡಕೆ ಕೊಯ್ಲು ಮಾಡಿದ ಬೆಳೆಗಾರರು ಹೈರಾಣಾಗುವಂತಾಗಿದೆ.

ತಾಲೂಕಿನ ರೈತರ ಆರ್ಥಿಕ ಬೆಳೆಯಾಗಿರುವ ಅಡಕೆ ಈಗಾಗಲೇ ಕೊಳೆ ಹಾಗೂ ಎಲೆಚುಕ್ಕಿ ರೋಗದಿಂದ ಬೆಳೆ ಹಾನಿ ಉಂಟಾಗಿದ್ದು, ಇದರಿಂದ ಚೇತರಿಸಿಕೊಳ್ಳುವುದು ಹೇಗೆ ಎಂದು ಚಿಂತಾಕ್ರಾಂತರಾಗಿದ್ದಾರೆ. ಈ ವರ್ಷ ಅಡಕೆ ಕೊಳೆಯಿಂದಾಗಿ ಶೇ.60ರಷ್ಟು ಬೆಳೆ ಹಾನಿ ಉಂಟಾಗಿದೆ. ಉಳಿದ ಬೆಳೆಯನ್ನು ಕೊಯ್ಲು ಮಾಡುವ ಧಾವಂತದಲ್ಲಿ ಬೆಳೆಗಾರರು ಮುಂದಾಗಿದ್ದಾರೆ.

ಕಳೆದ 15 ದಿನಗಳಿಂದ ತಾಲೂಕಿನ ಹಲವೆಡೆ ಅಡಕೆ ಕೊಯ್ಲು ಪ್ರಾರಂಭವಾಗಿದೆ. ಅಡಕೆ ಕೊಯ್ಲು ಪ್ರಾರಂಭವಾದಾಗಿನಿಂದ ಹವಾಮಾನದ ವೈಪರೀತ್ಯ, ಚಂಡಮಾರುತ, ಮೋಡ ಮುಸುಕಿದ ವಾತಾವರಣದಿಂದ ಬಿಸಿಲು ಕಾಣದಂತಾಗಿದೆ. ಇದರಿಂದ ಅಡಕೆ ಕೊಯ್ಲು ಮಾಡಿದ ಬೆಳೆಗಾರರು ಅಡಕೆ ಒಣಗಿಸಲಾಗದೆ ಸಂಕಟಪಡುತ್ತಿದ್ದಾರೆ.

ಮಳೆಯಿಂದಾಗಿ ಕೊಯ್ಲು ಮಾಡಿದ ಹಸಿ ಅಡಕೆಯನ್ನು ಸುಲಿದು, ಬೇಯಿಸಿ ಒಣಗಿಸಲು ಬಿಸಿಲು ಇಲ್ಲದೆ ಇರುವುದರಿಂದ ಸುಲಿದ ಅಡಕೆಯನ್ನು ನೀರಿನಲ್ಲಿ ಹಾಕಿ ಇಡುವಂತಾಗಿದೆ. ಈಗಾಗಲೇ ಒಂದೆರಡು ಬಿಸಿಲಿನಲ್ಲಿ ಒಣಗಲು ಹಾಕಿರುವ ಅಡಕೆ ಸರಿಯಾಗಿ ಒಣಗದೆ ಬೂಸ್ಟ್ (ಮುಗ್ಗು) ಹಿಡಿಯುವಂತಾಗಿದ್ದು, ಇದರಿಂದ ಅಡಕೆಯ ಗುಣಮಟ್ಟ ಸಮರ್ಪಕವಾಗುತ್ತಿಲ್ಲ ಎನ್ನುವ ಚಿಂತೆ ಬೆಳೆಗಾರದ್ದು.

ಫೆಂಗಲ್ ಚಂಡಮಾರುತದಿಂದಾಗಿ ಕಳೆದ ಮೂರು ದಿನಗಳಿಂದ ಮೋಡ ಮುಸುಕಿದ ವಾತಾವರಣ, ರಾತ್ರಿ ಮಳೆ ಬೀಳುತ್ತಿದ್ದು ಇದರಿಂದ ಅಡಕೆ ಬೆಳೆಗಾರರು ಮಾತ್ರ ಅಲ್ಲದೆ ಭತ್ತ ಬೆಳೆಗಾರರು ಸಂಕಷ್ಟ ಅನುಭವಿಸುವಂತಾಗಿದೆ.

ಚಂಡಮಾರುತದಿಂದಾಗಿ ಕೊಯ್ಲು ಮಾಡಿದ ಅಡಕೆಯನ್ನು ಸಂಸ್ಕರಿಸಲಾಗದೆ ತೊಂದರೆ ಪಡುವಂತಾಗಿದೆ. ಈಗಾಗಲೇ ಕೊಳೆರೋಗದಿಂದ ಅಡಕೆಗೆ ಹಾನಿ ಆಗಿದೆ. ಈಗ ಕೊಯ್ಲು ಮಾಡುವ ಸಮಯದಲ್ಲಿ ಮಳೆ ಬೀಳುತ್ತಿರುವುದರಿಂದ ಬೆಳೆ ರಕ್ಷಣೆ ಮಾಡಿಕೊಳ್ಳುವುದೇ ಸವಾಲಾಗಿದೆ. ಅಡಕೆ ಬೆಳೆ ಹಾನಿಗೆ ಸರ್ಕಾರ ಸೂಕ್ತ ಪರಿಹಾರ ನೀಡಲು ಮುಂದಾಗಬೇಕು. | ನರಸಿಂಹ ಹೆಗಡೆ ಹೊನ್ನೆಹದ್ದ, ಕೃಷಿಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net