ಕಾಡನೆಗಳ ದಾಳಿಗೆ ರೈತರು ಹೈರಾಣ

D.7-MDG-1P1
ಮೂಡಿಗೆರೆ ತಾಲೂಕಿನ ಗೋಣಿಬೀಡು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿರುವ ಕಾಡಾನೆ ಹಿಂಡು.
Published on

ಮೂಡಿಗೆರೆ: ಮಲೆನಾಡು ಭಾಗದಲ್ಲಿ ಕಾಡನೆಗಳ ಹಾವಳಿ ನಿರಂತರವಾಗಿ ಮುಂದುವರಿದಿದ್ದು, ಕಳೆದ 20 ದಿನದ ಹಿಂದೆ ಬೇಲೂರು ಭಾಗದಿಂದ ಮಾಕೋನಹಳ್ಳಿ ಮೂಲಕ ಮೂಡಿಗೆರೆ ತಾಲೂಕಿಗೆ ಲಗ್ಗೆಯಿಟ್ಟಿರುವ 19 ಕಾಡಾನೆಗಳ ಹಿಂಡು ಹಳಸೆ, ಕುನ್ನಳ್ಳಿ ಗ್ರಾಮದಲ್ಲಿ ಸಂಚರಿಸುತ್ತಾ ಕಾಫಿ ತೋಟ, ಭತ್ತದ ಗದ್ದೆಯನ್ನು ತುಳಿದು ಧ್ವಂಸಗೊಳಿಸಿದೆ. ಮಂಗಳವಾರ ಗೋಣಿಬೀಡು ಸಮೀಪದ ತುಮಕೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ ಕಾಡಾನೆ ಹಿಂಡನ್ನು ಅರಣ್ಯ ಇಲಾಖೆ ತಂಡ ಮತ್ತೆ ಕಾಡಿಗೆ ಓಡಿಸಲು ಯತ್ನಿಸುತ್ತಿದ್ದಾರೆ.
ಗೋಣಿಬೀಡು, ಕಸ್ಕೆಬೈಲ್,ಕಲ್ಲುಗುಡ್ಡ, ಚಂದ್ರಪುರ, ಗಾಡಿಚೌಕ, ಕಮ್ಮರಗೋಡು, ಆನೆದಿಬ್ಬ, ಹೊಸಪುರ, ಜಿ.ಹೊಸಳ್ಳಿ, ಸುತ್ತಮುತ್ತಲ ಗ್ರಾಮಗಳಲ್ಲಿ 15 ದಿನದಿಂದ ಗುಂಪಾಗಿ ತಿರುಗಾಡುತ್ತಿದ್ದ ತಂಡದಲ್ಲಿ 13 ಕಾಡಾನೆಗಳು ಇರಬಹುದು ಎಂದು ಅಂದಾಜಿಸಲಾಗಿತ್ತು. ಮಂಗಳವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೊಂಚ ದೂರ ತೆರಳಿ ಕಾಫಿ ತೋಟದೊಳಗೆ ಹೋದಾಗ 19 ಕಾಡಾನೆಗಳು ಇರುವುದು ತಿಳಿದುಬಂದಿದೆ. ಚರ್ಚ್‌ಹಾಲ್ ಸಮೀಪದ ಇಂದ್ರೇಶ್ ಎಂಬುವರ ತೋಟದಲ್ಲಿ ಸಾಕಷ್ಟು ಕಾಫಿ ಗಿಡಗಳಿಗೆ ಹಾನಿ ಮಾಡಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾಡಾನೆ ಓಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಒಂಟಿ ಕಾಡಾನೆ ಕಾಫಿ ತೋಟದೊಳಗೆ ನುಗ್ಗಿದರೆ ರೈತರು ಕಷ್ಟಪಟ್ಟು ಬೆಳೆದ ಕಾಫಿ, ಬಾಳೆ, ಅಡಕೆ ಗಿಡಗಳು ಮತ್ತು ಕಾಳುಮೆಣಸಿನ ಬಳ್ಳಿಗಳು ಸಂಪೂರ್ಣ ಧ್ವಂಸವಾಗುತ್ತದೆ. ಭತ್ತದ ಗದ್ದೆಯಲ್ಲಿ ತಿರುಗಾಡಿದರೆ ಸಸಿಮುಡಿಗಳು ಪೂರ್ಣ ನಾಶವಾಗುತ್ತದೆ. ಇನ್ನೂ 19 ಕಾಡಾನೆಗಳು ಏಕಕಾಲದಲ್ಲಿ ರೈತರ ಜಮೀನಿನಲ್ಲಿ ದಾಳಿ ನಡೆಸಿದರೆ ಬೆಳೆಗಳು ಸಂಪೂರ್ಣ ಹಾನಿಯಾಗಲಿದೆ. 19 ಕಾಡನೆಗಳ ಗುಂಡಪಿನಲ್ಲಿ ನಾಲ್ಕೈದು ಮರಿಗಳು ಇರುವುದರಿಂದ ಹೆಚ್ಚು ದೂರ ಸಾಗಲು ಸಾಧ್ಯವಾಗದೆ ತೋಟಗಳಲ್ಲಿ ನಿರಂತರವಾಗಿ ಸಂಚರಿಸುತ್ತಿರುವುದರಿಂದ ಕಾಫಿ ಬೆಳೆ ಹಾನಿ ಪ್ರಮಾಣ ಇನ್ನಷ್ಟು ಹೆಚ್ಚಾಗಿದೆ.
ಬುಧವಾರ ಕಾಡಾನೆಗಳು ಅರ್ಜುನ್ ಕಾಫಿ ಎಸ್ಟೇಟ್, ಜಿ.ಹೊಸಳ್ಳಿ, ಪೊಡಿಯ ಕಾಲನಿ, ಹೊಸಪುರ ಗ್ರಾಮದ ಕಾಫಿ ತೋಟದಲ್ಲಿ ತಿರುಗಾಡುತ್ತಿದ್ದವು. ಕಾಡಾನೆಗಳ ಹಿಂಡು ನಿರ್ದಿಷ್ಟವಾಗಿ ಯಾವ ಸ್ಥಳದಲ್ಲಿದೆ ಎಂದು ಗೊತ್ತಾಗದೆ ಕಳೆದ ಒಂದು ವಾರದಿಂದ ರೈತರು, ಕೂಲಿ ಕಾರ್ಮಿಕರು ಭಯದಿಂದ ತೋಟ, ಗದ್ದೆಗಳಿಗೆ ತೆರಳದೆ ಕೃಷಿ ಚಟುವಟಿಕೆಗಳು ಸ್ಥಬ್ಧವಾಗಿದೆ. ವಿದ್ಯಾರ್ಥಿಗಳು ಶಾಲೆ-ಕಾಲೇಜಿಗೆ ತೆರಳಲು ಭಯ ಪಡುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net