

ಮಲ್ಲು ಕಳಸಾಪುರ ಲಕ್ಷ್ಮೇಶ್ವರ
ಪ್ರಸ್ತುತ ವರ್ಷ ಉತ್ತಮ ಮುಂಗಾರು ಮಳೆ-ಬೆಳೆ ರೈತರಲ್ಲಿ ಹೊಸ ಭರವಸೆ, ಹರ್ಷ ಮೂಡಿಸಿದ್ದು ಇತ್ತೀಚಿಗಷ್ಟೇ ಕಾರಹುಣ್ಣಿಮೆ ಹಬ್ಬದ ಸಂಭ್ರಮ ಸವಿದ ರೈತ ಸಮುದಾಯ ಈಗ ಮಣ್ಣೆತ್ತಿನ ಹಬ್ಬದ ಆಚರಣೆಗೆ ಸಜ್ಜಾಗಿದ್ದಾರೆ.
ಕೃಷಿಯೇ ಬದುಕಿನ ಮೂಲಾಧಾರವನ್ನಾಗಿಸಿಕೊಂಡ ರೈತರೂ ಸೇರಿ ಬಹುತೇಕ ಎಲ್ಲ ವರ್ಗದವರು ಜು.5ರಂದು ಮಣ್ಣೆತ್ತಿನ ಹಬ್ಬ ಆಚರಿಸಲು ಸಜ್ಜಾಗಿದಾರೆ. ಸಕಾಲಿಕ ಮಳೆಯಿಂದ ಈ ವರ್ಷ ನಿಜವಾದ ಎತ್ತುಗಳಿಗೂ ಬೇಡಿಕೆ ಹೆಚ್ಚಿದ್ದು ಹಬ್ಬಕ್ಕಾಗಿ ಮಣ್ಣೆತ್ತಿನ (ಬಸವಣ್ಣನ) ಮೂರ್ತಿಗಳ ಮಾರಾಟವೂ ಜೋರಾಗಿದೆ.
ಮಣ್ಣೆತ್ತಿನ ಅಮವಾಸ್ಯೆ ವಿಶೇಷತೆ: ಮಣ್ಣೆತ್ತಿನ ಅಮವಾಸ್ಯೆ ದಿನ ಮಣ್ಣೆತ್ತಿನ ಮೂರ್ತಿಗಳನ್ನು ಅದರ ಮುಂದೆ ಗೋದಲಿ ಮಾಡಿ ಜಗುಲಿಯ ಮೇಲಿಟ್ಟು ಕರಿಗಡುಬು, ಕಿಚಡಿ ಪ್ರಸಾದ ಮಾಡಿ ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತಾರೆ. ಎತ್ತು, ಜಮೀನು ಇದ್ದವರಷ್ಟೇ ಅಲ್ಲದೇ ಇಲ್ಲದವರೂ ಸಂಪ್ರದಾಯದಂತೆ ಈ ಹಬ್ಬ ಆಚರಿಸುತ್ತಾರೆ. ಕೆಲವರು ಹಬ್ಬದ ಮರುದಿನ ನಾಗರ ಪಂಚಮಿವರೆಗೂ ಪೂಜಿಸಿ ನಂತರ ಮೂರ್ತಿಗಳನ್ನು ತಮ್ಮ ಹೊಲಗಳಲ್ಲಿನ ಬನ್ನಿ ಮರದ ಕೆಳಗಿಟ್ಟು ಉತ್ತಮ ಫಸಲು ಬರಲಿ, ಎತ್ತುಗಳಿಗೆ ಯಾವುದೇ ಕಾಯಿಲೆ ಬಾರದಿರಲಿ ಎಂದು ಪ್ರಾರ್ಥಿಸುತ್ತಾರೆ. ಕೆಲವರು ವರ್ಷಪೂರ್ತಿ ಪೂಜಿಸಿ ಹೊಸ ಎತ್ತಿನ ಮೂರ್ತಿ ಪೂಜೆ ಬಳಿಕ ಕಳೆದ ವರ್ಷದ ಎತ್ತಿನ ಮೂರ್ತಿಗಳನ್ನು ಹೊಲದ ಮರದಡಿ ಇಡುವ ಪದ್ಧತಿಯೂ ಇದೆ. ಇತ್ತೀಚಿನ ದಿನಗಳಲ್ಲಿ ಕೆಲವರು ತಮ್ಮ ಮನೆಯ ಶೋಕೇಸ್‌ಗಳಲ್ಲಿ, ಸೆಲ್ಪ್‌ಗಳಲ್ಲಿಡುವುದು ರೂಢಿಯಾಗಿದೆ.
ಹೆಚ್ಚಿದ ಬೇಡಿಕೆ: ಮಣ್ಣೆತ್ತಿನ ಹಬ್ಬಕ್ಕೆ ಲಕ್ಷ್ಮೇಶ್ವರದ 20ಕ್ಕೂ ಹೆಚ್ಚು ಕುಂಬಾರರ ಮನೆಗಳಲ್ಲಿ ಸಿದ್ಧಗೊಂಡಿರುವ ವಿವಿಧ ಬಣ್ಣಗಳಿಂದ ಅಲಂಕೃತಗೊಂಡ ಸಾವಿರಾರು ಮಣ್ಣೆತ್ತಿನ ಮೂರ್ತಿಗಳಿಗೆ ೀ ಸಲ ಭಾರಿ ಡಿಮಾಂಡ್ ಬಂದಿದೆ. ಪಟ್ಟಣದಿಂದ ದಾವಣಗೆರೆ, ಹರಿಹರ, ರಾಣೆಬೆನ್ನೂರ, ಧಾರವಾಡ, ಶಿವಮೊಗ್ಗ, ಗದಗ, ಹಾವೇರಿ, ಹುಬ್ಬಳ್ಳಿ ಸೇರಿ ಸುತ್ತಲಿನ ಗ್ರಾಮಗಳಿಗೆ ಮೂರ್ತಿಗಳು ಮಾರಾಟವಾಗುತ್ತಿವೆ. ಕುಂಬಾರರ ಮನೆತನದ ಕಲಾವಿದರು ತಿಂಗಳುಗಳ ಮೊದಲೇ ವಿಶೇಷ ಮಣ್ಣನ್ನು ಸಂಗ್ರಹಿಸಿ ಸಂಪ್ರದಾಯದಂತೆ ಹದ ಮಾಡಿ ಮೂರ್ತಿಗಳ ತಯಾರಿಕೆ ಮಾಡುತ್ತಾರೆ. ಸಂಪೂರ್ಣ ಒಣಗಿರುವ ಮೂರ್ತಿಗಳು ಕೆಳಗೆ ಬಿದ್ದರೂ ಒಡೆಯುವುದಿಲ್ಲ.. ಕೊಡುಗಳಿಗೆ ಕೊಂಬೆಣಸು, ಇಣಿಗವಚ, ಜೂಲಾ, ಕೊರಳಿಗೆ ಗಂಟೆ ಸರ, ಹಣೆಪಟ್ಟಿ, ಕಾಲ್ಗೆಜ್ಜೆ, ಮೂಗುದಾರ, ವಿಭೂತಿ, ಕಣ್ಣು, ಕಿವಿ, ಮೂಗು, ಬಾಯಿ ಬರೆದು ಮೂರ್ತಿಗಳನ್ನು ಚಂದಗಾಣಿಸುತ್ತಾರೆ. ಜೋಡೆತ್ತಿನ ಸಣ್ಣ ಮೂರ್ತಿಗಳು, 30, 50 ರೂ, ಮಧ್ಯಮ 80, 100, 200 ರೂ.ಗಳಿಗೆ ಮಾರಿದರೆ ವಿಶೇಷವಾಗಿ ತಯಾರಿಸಿದ ಎತ್ತುಗಳಿಗೆ 500 ರಿಂದ 1000, 2000 ರೂ. ವರೆಗೂ ಮಾರಾಟವಾಗುತ್ತವೆ. ಪ್ರತಿವರ್ಷ ಲಕ್ಷ್ಮೇಶ್ವರ ಪಟ್ಟಣವೊಂದರಲ್ಲಿಯೇ 40 ಸಾವಿರಕ್ಕೂ ಹೆಚ್ಚು ಮೂರ್ತಿಗಳು ಸಿದ್ಧಗೊಂಡು ಮಾರಾಟವಾಗುತ್ತವೆ.
ರೈತರ ಬದುಕಿಗೆ ಆಧಾರವಾದ ಎತ್ತುಗಳ ಮೇಲೆ ರೈತರಿಗೆ ಅಪಾರ ಪ್ರೀತಿ. ಇತ್ತೀಚಿಗೆ ಯಂತ್ರೋಪಕರಣಗಳು ಕೃಷಿ ಕೆಲಸಕ್ಕೆ ಸಹಾಯಕವಾಗಿದ್ದರೂ ಎತ್ತುಗಳು ಅವಶ್ಯಕವಾಗಿವೆ. ಜೀವನಾಡಿ ಎತ್ತುಗಳಿಗೆ ಹಿಂದಿನಿಂದಲೂ ಪೂಜನೀಯ ಸ್ಥಾನವಿದ್ದು ಎತ್ತುಗಳು ರೈತರ ಮನೆಗೆ ಶೋಭೆ ಮತ್ತು ಮಂಗಳಕರವಾಗಿವೆ. ಮುಂಗಾರಿನಲ್ಲಿ ಬಿತ್ತಿದ ಬೆಳೆಗಳು ಫಲವತ್ತಾಗಿ ಬರಲಿ ಮತ್ತು ತಮ್ಮ ಎತ್ತುಗಳಿಗೆ ಯಾವ ತೊಂದರೆ ಬಾರದಿರಲಿ. ಅವುಗಳಿಂದ ನಮ್ಮ ಬಾಳು ಹಸನಾಗಲೆಂಬ ಭಾವನೆಯಿಂದ ಈ ಮಣ್ಣೆತ್ತಿನ ಅಮಾವಾಸೆ ಆಚರಿಸಲಾಗುತ್ತದೆ.ಚನ್ನಪ್ಪ ಆದಿ, ರೈತ, ಲಕ್ಷ್ಮೇಶ್ವರ
ನಮ್ಮ ಪೂರ್ವಜರಿಂದಲೂ ಮಣ್ಣೆತ್ತು, ಗಣಪತಿ ಮೂರ್ತಿಗಳ ತಯಾರಿಕೆಯೇ ಬದುಕಿಗೆ ಆಸರೆಯಾಗಿದೆ. ವರ್ಷದಿಂದ ವರ್ಷಕ್ಕೆ ನಮ್ಮೂರ ಮೂರ್ತಿಗಳಿಗೆ ಬೇಡಿಕೆ ಹೆಚ್ಚುತ್ತಿದ್ದು ಸಿದ್ಧಪಡಿಸಿದ ಮೂರ್ತಿಗಳಲ್ಲಿ ಬಹಳಷ್ಟು ಬೇರೆ ಜಿಲ್ಲೆ, ತಾಲೂಕುಗಳಿಗೆ ಮಾರಾಟ ಮಾಡಲಾಗುತ್ತದೆ. ಮಣ್ಣೆತ್ತಿನ ಮೂರ್ತಿಗಳ ಮಾರಾಟ ನಮ್ಮ ಬದುಕಿಗೆ ಆಸರೆಯಾಗಿದೆ. ರೈತರ ಸಂಪ್ರದಾಯಬದ್ಧ ಪೂಜೆಗೆ ಮಳೆರಾಯ ಕೃಪೆ ತೋರಲಿ. ಉತ್ತಮ ಮಳೆಬೆಳೆ ಬಂದು ಅನ್ನದಾತರ ಬದುಕು ಹಸನಾಗಲಿ.ಕುಮಾರ ಕುಂಬಾರ, ಫಕೀರೇಶ ಕುಂಬಾರ, ಮೂರ್ತಿ ತಯಾರಕರು