

ನರೇಗಲ್ಲ: ನೀರಾವರಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ವಿರೋಧಿಸಿ ರೈತರು ಪಟ್ಟಣದ 110 ಕೆ.ವಿ. ಕೇಂದ್ರಕ್ಕೆ ಸೋಮವಾರ ಮುತ್ತಿಗೆ ಹಾಕಿದರು. ಇದರಿಂದಾಗಿ ಗ್ರಿಡ್‌ನಿಂದ ಪೂರೈಕೆಯಾಗುತ್ತಿದ್ದ ಎಲ್ಲ ಗ್ರಾಮಗಳ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗಿತ್ತು.
ರೈತ ಸಂಗಪ್ಪ ಕುಂಬಾರ, ರವಿ ಯತ್ನಟ್ಟಿ ಮಾತನಾಡಿ, ಈ ಹಿಂದೆ ನೀರಾವರಿ ಪಂಪ್‌ಸೆಟ್‌ಗಳಿಗೆ ಬೆಳಗ್ಗೆ 9ರಿಂದ ಸಂಜೆ 4 ಗಂಟೆ ವರೆಗೆ 3 ಫೇಸ್ ವಿದ್ಯುತ್ ವಿತರಿಸಲಾಗುತ್ತಿತ್ತು. ಈಗ ಏಕಾಏಕಿ 2-3 ಗಂಟೆ ಮಾತ್ರ ವಿದ್ಯುತ್ ಪೂರೈಸಲಾಗುತ್ತಿದೆ. ಇದರಿಂದ ಬೆಳೆ ರಕ್ಷಣೆ ಕಷ್ಟವಾಗಿದೆ. ಮುಂಚಿತವಾಗಿ ಮಾಹಿತಿ ನೀಡಿದ್ದರೆ ಬಿತ್ತನೆ ಮಾಡುತ್ತಿರಲಿಲ್ಲ. ರೈತರ ಪಂಪ್‌ಸೆಟ್‌ಗಳಿಗೆ 7 ಗಂಟೆ ಕಾಲ 3ಫೇಸ್ ವಿದ್ಯುತ್ ಪೂರೈಸುವವರೆಗೆ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದರು.
ರೈತರಾದ ಬಸವರಾಜ ತಳವಾರ, ಪಿ.ಕೆ. ರಡ್ಡೇರ ಮಾತನಾಡಿ, ಲಭ್ಯವಿರುವ ಹಾಗೂ ಪೂರೈಕೆಯಾಗುವ ವಿದ್ಯುತ್ ಬಗ್ಗೆ ಅಧಿಕಾರಿಗಳು ಸಮರ್ಪಕವಾಗಿ ಮಾಹಿತಿ ಇಟ್ಟುಕೊಳ್ಳದ ಕಾರಣ ಸಮಸ್ಯೆ ಎದುರಾಗಿದೆ ಎಂದರು.
ಪ್ರತಿಕ್ರಿಯಿಸಿದ ಇಇ ರವಿಕಿರಣ, ಎಇಇ ಚೇತನಕುಮಾರ ಹಾದಿಮನಿ, ವಿದ್ಯುತ್ ಉತ್ಪಾದನೆ ಕಡಿಮೆಯಾಗಿದ್ದರಿಂದ ಲೋಡ್ ಶೇಡ್ಡಿಂಗ್ ಮಾಡಲಾಗುತ್ತಿದೆ. ರೈತರು ಸಹಕರಿಸಬೇಕು ಎಂದರು.
ಬಳಿಕ ಸ್ಥಳಕ್ಕೆ ಆಗಮಿಸಿದ ಹೆಸ್ಕಾಂ ಎಸ್‌ಇ ಶರಣಮ್ಮ ಜಂಗೀನ, ವಿದ್ಯುತ್ ವ್ಯತ್ಯಯ ಕುರಿತು ಚರ್ಚಿಸಲು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರು ಮಂಗಳವಾರ ಸಭೆ ಕರೆದಿದ್ದಾರೆ. ಅಲ್ಲಿ ರೈತರ ಸಮಸ್ಯೆಗಳನ್ನು ಗಮನಕ್ಕೆ ತಂದು ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದರು.
ಶಾಖಾಧಿಕಾರಿ ಮಹಾಂತೇಶ ಮೊರಬದ, ಪಿಎಸ್‌ಐ ನಾಗರಾಜ ಗಡಾದ ಇದ್ದರು. ಪ್ರತಿಭಟನೆಯಲ್ಲಿ ಮಂಜುನಾಥ ನಾಯ್ಕರ, ಪ್ರಕಾಶ ನಾಯ್ಕರ, ಕರಬಸಯ್ಯ ಶಿವಪೂಜಿ, ವೀರಭದ್ರಪ್ಪ ಬಂಡಿಹಾಳ, ಶರಣಪ್ಪ ಯಲರಡ್ಡಿ, ಸುನೀಲ ಬಸವರಡ್ಡೇರ, ಪ್ರವೀಣ ಹೆಗ್ಗಡದಿನ್ನಿ, ಸಚೀನ ಪಾಟೀಲ, ಗಣೇಶ ಬಂಡಿವಡ್ಡರ, ರವಿ ಜಂತ್ಲಿ, ಶರಣಪ್ಪ ಅವರಡ್ಡಿ , ಮಣಿಕಂಠ ಅರಳಿಕಟ್ಟಿ, ಹೇಮಣ್ಣ ನಡುವಲಗುಡ್ಡ, ಪ್ರವೀಣ ಹಿರೇಮಠ, ಬಸವರಾಜ ಮಳಗಿ ಇತರರು ಪಾಲ್ಗೊಂಡಿದ್ದರು.