ಹಳ್ಳಿಮಾಳ ಸೊಸೈಟಿ ಚುನಾವಣೆ ಮುಂದೂಡಿದ್ದಕ್ಕೆ ರೈತರ ಆಕ್ರೋಶ

Rmgm-Ph-01-DR Office Protest News Photo-Raitharu - Rmgm-29-6-2024
Published on

ರಾಮನಗರ

ಹಳ್ಳಿಮಾಳ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆಯಬೇಕಿದ್ದ ಚುನಾವಣೆ ಮುಂದೂಡಿದ್ದನ್ನು ವಿರೋಧಿಸಿ ಬಿಜೆಪಿ-ಜೆಡಿಎಸ್ ರೈತ ಮೋರ್ಚಾ ಪದಾಧಿಕಾರಿಗಳು, ರೈತ ಮುಖಂಡರು, ಸದಸ್ಯರು ರಾಮನಗರದ ಕಂದಾಯ ಭವನದಲ್ಲಿರುವ ಜಿಲ್ಲಾ ನೋಂದಣಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಶನಿವಾರ ಪ್ರತಿಭಟನೆ ನಡೆಸಿದರು.

ಸಂಘದ ಅಧ್ಯಕ್ಷ ಸ್ಥಾನಕ್ಕೆ ಶನಿವಾರ ಚುನಾವಣೆ ನಿಗದಿಯಾಗಿತ್ತು. ಆದರೆ ರಾಜಕೀಯ ಕಾರಣದಿಂದ ಗ್ರಾಮದಲ್ಲಿ ಅಶಾಂತಿಗೆ ಕಾರಣವಾಗಬಹುದು ಎಂದು ಪೊಲೀಸ್ ಇಲಾಖೆ ಅಭಿಪ್ರಾಯದ ಮೇರೆಗೆ ಶುಕ್ರವಾರ ಸಂಜೆ ಚುನಾವಣೆಯನ್ನು ಸಹಕಾರ ಸಂಘಗಳ ಉಪನಿಬಂಧಕರು ನಿಯೋಜಿಸಿದ್ದ ಚುನಾವಣಾಧಿಕಾರಿಗಳು ಮುಂದೂಡಿದ್ದರು.

ಮುತ್ತಿಗೆಯ ಈ ವೇಳೆ ಜಿಲ್ಲಾ ನೋಂದಣಾಧಿಕಾರಿ ಕಚೇರಿಯಲ್ಲಿ ಇರಲಿಲ್ಲ. ಸಹಕಾರ ಇಲಾಖೆಯಿಂದ ಸರಿಯಾದ ಮಾಹಿತಿ ದೊರೆಯದ ಕಾರಣ ಜಿಲ್ಲಾಧಿಕಾರಿಗೆ ಮುಖಂಡರು ವಿಷಯ ತಿಳಿಸಿದರು.

ಸಹಕಾರ ನಿಬಂಧಕರ ಕಚೇರಿಯಲ್ಲಿ ನಡೆಯುತ್ತಿದ್ದ ರೈತರ ಪ್ರತಿಭಟನೆ ವಿಷಯ ತಿಳಿದುಕೊಂಡ ಜಿಲ್ಲಾಧಿಕಾರಿಗಳು ತಹಸೀಲ್ದಾರ್ ಅವರನ್ನು ಕಳುಹಿಸಿ ರೈತ ಮುಖಂಡರ ಮನವಿ ಆಲಿಸಲು ಮುಂದಾದರು. ತಹಸೀಲ್ದಾರ್ ತೇಜಸ್ವಿನಿ ಸ್ಥಳಕ್ಕೆ ಬಂದು ಸಮಸ್ಯೆ ಆಲಿಸಿದರು. ಈ ವೇಳೆ ಹಳ್ಳಿಮಾಳ ಸಂಘದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯ ಸಂದರ್ಭದಲ್ಲಿ ಚುನಾವಣಾಧಿಕಾರಿಗಳು ನಡೆದುಕೊಂಡಿರುವ ಕ್ರಮದ ಬಗ್ಗೆ ಪ್ರತಿಭಟನಾಕಾರರು ಕಿಡಿಕಾರಿದರು.

ಆರೋಪವೇನು?

ಸಂಘದಲ್ಲಿ 7 ಮಂದಿ ಜೆಡಿಎಸ್ ಬೆಂಬಲಿತ, 4 ಮಂದಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಿದ್ದು, ಚುನಾವಣೆ ನಡೆದರೆ ಅಧ್ಯಕ್ಷ ಸ್ಥಾನ ಜೆಡಿಎಸ್‌ಗೆ ಸೇರುತ್ತದೆ ಎಂದು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಮತ್ತು ಕಾಂಗ್ರೆಸ್ ಮುಖಂಡರು ಜೆಡಿಎಸ್ ಬೆಂಬಲಿತರ ಪೈಕಿ ಕೆಲವರನ್ನು ಸೆಳೆಯಲು ಹುನ್ನಾರ ನಡೆಸಿ ಪೊಲೀಸರು ಮತ್ತು ಸಹಕಾರ ಇಲಾಖೆಯ ಅಧಿಕಾರಿಗಳ ಮೇಲೆ ಒತ್ತಡ ತಂದು ಚುನಾವಣೆ ಮುಂದೂಡಿಸಿದ್ದಾರೆ ಎಂದು ಮುಖಂಡರು ತಹಸೀಲ್ದಾರ್ ಮುಂದೆ ಆರೋಪಿಸಿದರು.

ಚುನಾವಣೆ ನಡೆಸಲು ಪಟ್ಟು

ಸಹಕಾರ ಸಂಘಗಳ ಅಧಿಕಾರಿಗಳು ಒಂದು ಪಕ್ಷದ ಕೈಗೊಂಬೆಗಳಂತೆ ಕೆಲಸ ಮಾಡುತ್ತಿದ್ದಾರೆ. ಹಲವು ಸಂಘಗಳಲ್ಲಿ ಚುನಾವಣೆ ನಡೆಸುತ್ತಿಲ್ಲ. ಸಹಕಾರ ತತ್ವವನ್ನು ಗಾಳಿಗೆ ತೂರಿದ್ದಾರೆ. ಕೂಡಲೇ ಚುನಾವಣೆ ನಡೆಸಬೇಕು. ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆ ಮಾಡುತ್ತದೆ. ಇದು ಒತ್ತಡ ತಂತ್ರ. ಸೋಮವಾರವೇ ಸಂಘಕ್ಕೆ ಚುನಾವಣೆ ನಡೆಸಿ ಕಾನೂನು ಎಲ್ಲರಿಗೂ ಒಂದೇ ಎಂದು ತೋರಿಸಬೇಕು. ಅಧಿಕಾರಿಗಳು ಒಂದು ಪಕ್ಷದ ಪರವಾಗಿ ಕೆಲಸ ಮಾಡಬಾರದು ಎಂದು ಒತ್ತಾಯಿಸಿದರು.

ಬಿಜೆಪಿ ರೈತಮೋರ್ಚಾ ರಾಜ್ಯ ಉಪಾಧ್ಯಕ್ಷ ಎಂ. ರುದ್ರೇಶ್, ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಪಿ. ಅಶ್ವಥ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಆನಂದಸ್ವಾಮಿ, ರೈತಮೋರ್ಚಾ ಅಧ್ಯಕ್ಷ ಪ್ರಕಾಶ್, ಗ್ರೇಟರ್ ಬಿಡದಿ ಪ್ರಾಧಿಕಾರ ಮಾಜಿ ಅಧ್ಯಕ್ಷ ವರದರಾಜು ಬಾಬು, ಮುಖಂಡರಾದ ಮುರಳೀಧರ್, ಸಬ್ಬಕೆರೆ ಶಿವಲಿಂಗಯ್ಯ, ಎಸ್.ಆರ್. ನಾಗರಾಜು, ನರಸಿಂಹಮೂರ್ತಿ, ರಾಮಕೃಷ್ಣಯ್ಯ, ನಾಗಾನಂದ್, ಪುಷ್ಪಲತಾ, ಮಹೇಶ್, ಚಂದ್ರಶೇಖರ್, ಜಗನ್ನಾಥ್, ರವಿ, ಕಾಳಯ್ಯ, ಮಂಜು, ಸಂಜಯ್ ಮುಂತಾದವರಿದ್ದರು.

ಸಂಘದ ನಿರ್ದೇಶಕರು, ರೈತ ಮುಖಂಡರಿಂದ ಮನವಿ ಆಲಿಸಲಾಗಿದೆ. ಜಿಲ್ಲಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳ ಬಳಿ ಇಲ್ಲಿನ ವಿಷಯ ತಿಳಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಬಳಿ ಜಿಲ್ಲಾಧಿಕಾರಿಗಳು ಚರ್ಚಿಸಿ ಮುಂದಿನ ಅಗತ್ಯ ಕ್ರಮ ಕೈಗೊಳ್ಳುತ್ತಾರೆ. ತೇಜಸ್ವಿನಿ, ತಹಸೀಲ್ದಾರ್ ರಾಮನಗರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net