ಭೂಮಿ ಉಳಿವಿಗಾಗಿ ಉಪವಾಸ

Farmers are on hunger strike
channarayapattana Farmers are on hunger strike
Published on

ವಿಜಯವಾಣಿ ಸುದ್ದಿಜಾಲ ಚನ್ನರಾಯಪಟ್ಟಣ
ಕೆಐಎಡಿಬಿಯಿಂದ ಭೂಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿ ಚನ್ನರಾಯಪಟ್ಟಣದಲ್ಲಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ 546 ದಿನ ಪೂರೈಸಿತು. ರೈತರು ಉಪವಾಸ ಸತ್ಯಾಗ್ರಹ ಕೈಗೊಳ್ಳುವ ಮೂಲಕ ಗಮನಸೆಳೆದರು.
ರೈತ ಮುಖಂಡ ಅಶ್ವತ್ಥಪ್ಪ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದು 139 ದಿನಗಳಾಗಿವೆ. ಈ ಮೊದಲು, ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಧರಣಿ ನಡೆಸುತ್ತಿದ್ದ ವೇಳೆ ಇಂದಿನ ಮುಖ್ಯಮಂತ್ರಿಗಳು, ಅಂದಿನ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ, ಹೋರಾಟ ಬೆಂಬಲಿಸಿದ್ದರು. ಜತೆಗೆ ಅಧಿಕಾರಕ್ಕೆ ಬಂದರೆ ಭೂಮಿ ಉಳಿಸಿ ನ್ಯಾಯ ದೊರಕಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಈಗ ಮೌನವಾಗಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಅವರು ಚುನಾವಣೆ ಸಮಯದಲ್ಲಿ ಧರಣಿ ಸ್ಥಳಕ್ಕೆ ಬಂದು ರೈತರ ಪರ ನಿಲ್ಲುವುದಾಗಿ ಹೇಳಿದ್ದರು. ಆದರೆ ಇಂದು ಇಡೀ ಸರ್ಕಾರ ಎಲ್ಲವನ್ನು ಮರೆತಂತೆ ವರ್ತಿಸುತ್ತಿದೆ ಎಂದು ಬೇಸರಿಸಿದರು.
ನಲಪ್ಪನಹಳ್ಳಿ ರೈತ ಮುಖಂಡ ನಂಜಪ್ಪ ಮಾತನಾಡಿ, ಒಂದೂವರೆ ವರ್ಷದಿಂದ ಹೋರಾಟ ನಡೆಯುತ್ತಿದೆ. ಸರ್ಕಾರಗಳು ಬದಲಾಗಿವೆ. ಬಿಜೆಪಿ, ಕಾಂಗ್ರೆಸ್ ಸರ್ಕಾರ ರೈತರ ಒತ್ತಾಯವನ್ನು ಗಮನಿಸದೆ ಪಂಚೇಂದ್ರಿಯ ಇಲ್ಲದಂತೆ ವರ್ತಿಸುತ್ತಿವೆ. ಇನ್ನಾದರೂ ಸರ್ಕಾರ ರೈತರ ಹೋರಾಟಕ್ಕೆ ಮಣಿಯಬೇಕು. ಇಲ್ಲವಾದರೆ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ತಿಳಿಸಿದರು.
ತಾಪಂ ಮಾಜಿ ಸದಸ್ಯ ಕಾರಳ್ಳಿ ಶ್ರೀನಿವಾಸ್ ಮಾತನಾಡಿ, ಉಸ್ತುವಾರಿ ಸಚಿವರಿಗೆ ರೈತರ ಬಗ್ಗೆ ಕಾಳಜಿ ಇಲ್ಲವಾಗಿದೆ. ಎಷ್ಟು ಬಾರಿ ಅವರನ್ನು ಭೇಟಿ ಮಾಡಿದರೂ ವಾರದ ಕಥೆ ಹೇಳಿಕೊಂಡು ಸಮಯ ಕಳೆಯುತ್ತಿದ್ದಾರೆ. ಜಿಲ್ಲಾಧಿಕಾರಿ ಸಭೆ ಮಾಡುವ ನೆಪ ಹೇಳುತ್ತಿದ್ದಾರೆ. ರೈತರನ್ನು ಕಡೆಗಣಿಸಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net