

ನೆಲಮಂಗಲ: ರೈತರು ಡೇರಿಗೆ ಗುಣಮಟ್ಟದ ಹಾಲು ಪೂರೈಸಲು ಹೆಚ್ಚಿನ ಆದ್ಯತೆ ನೀಡಬೇಕು. ಇಲ್ಲವಾದಲ್ಲಿ ಸಹಕಾರ ಸಂಘಕ್ಕೆ ಕೆಟ್ಟ ಹೆಸರು ಬರುವ ಜತೆಗೆ ಭಾರಿ ನಷ್ಟಕ್ಕೂ ಒಳಗಾಗಬೇಕಾಗುತ್ತದೆ ಎಂದು ಬಮುಲ್ ನಿರ್ದೇಶಕ ಜಿ.ಆರ್. ಭಾಸ್ಕರ್ ಹೇಳಿದರು.
ನೆಲಮಂಗಲ ನಗರಸಭೆ ವ್ಯಾಪ್ತಿಯ ಹೊನ್ನಗಂಗಯ್ಯಪಾಳ್ಯದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿದರು. ರೈತರು ಹಣದಾಸೆಗಾಗಿ ವಿಷ ಹಾಕುವವರಲ್ಲ. ಹಸಿದವರಿಗೆ ಅನ್ನ ಹಾಕುವವರು ಎಂಬುದನ್ನು ಮರೆಯಬಾರದು. ಗುಣಮಟ್ಟದ ಹಾಲು ಕೊಟ್ಟಾಗ ಮಾತ್ರ ಬಮುಲ್ ಕೂಡ ಉನ್ನತ ಸ್ಥಾನಕ್ಕೇರಲು ಸಾಧ್ಯವಾಗುತ್ತದೆ ಎಂದರು.
ಕೊವೀಡ್-19 ಪಿಡುಗಿನಿಂದಾಗಿ ಹಾಲಿನ ದರವನ್ನು 5 ರೂ. ಕಡಿಮೆ ಮಾಡಿದ್ದು ಬೇಸರದ ಸಂಗತಿ. ಸಂಬಂಧ ಪಟ್ಟವರೊಂದಿಗೆ ಚರ್ಚಿಸಿ ಪ್ರತಿ ಲೀಟರ್‌ಗೆ 30 ರೂ. ಕೊಡಿಸಲು ಪ್ರಯತ್ನಿಸುವೆ ಎಂದು ಭರವಸೆ ನೀಡಿದರು.
ಹಾಲು ಕರೆಯುವ ಯಂತ್ರವನ್ನು ಬಮುಲ್‌ನಿಂದ ಕಡಿಮೆ ದರದಲ್ಲಿ ನೀಡಲಾಗುತ್ತಿದೆ. ಇದರ ಲಾಭ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಬಮುಲ್ ಸಂಸ್ಥೆ ಉಪವ್ಯವಸ್ಥಾಪಕ ಗೋಪಾಲ್‌ಗೌಡ ಮಾತನಾಡಿ, ಗ್ರಾಮೀಣ ಭಾಗದ ರೈತರು ಹೈನುಗಾರಿಕೆಯನ್ನು ಅವಲಂಬಿಸಿ ಅರ್ಥಿಕವಾಗಿ ಮುಂದುವರಿಯುತ್ತಿದ್ದಾರೆ. ಪ್ರತಿ 15 ದಿನಕೊಮ್ಮೆ ರೈತರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲಾಗುತ್ತಿದ್ದು, ಇದರಿಂದ ರೈತ ಕುಟುಂಬಗಳಿಗೆ ಅನುಕೂಲವಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಪ್ರತಿದಿನ 800ಕ್ಕೂ ಹೆಚ್ಚು ಲೀಟರ್ ಹಾಲು ಕೊಡುತ್ತಿರುವ ಸಂಘದ ಸದಸ್ಯ ಮುನೀರ್ ಅಹಮದ್ ಅವರನ್ನು ಸನ್ಮಾನಿಸಲಾಯಿತು.
ಹೊನ್ನಗಂಗಯ್ಯಪಾಳ್ಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಆರ್. ಜಗದೀಶ್, ನಿರ್ದೇಶಕರಾದ ರಾಜಶೇಖರಯ್ಯ, ಎಸ್. ಗಂಗರಾಜು, ಎಚ್.ಸಿ. ಸಿದ್ದಗಂಗಯ್ಯ, ಹನುಮಂತರಾಜು, ಸಿದ್ದಗಂಗಯ್ಯ, ಎಂ.ಸಿ. ಲಕ್ಷ್ಮಮ್ಮ, ಭಾಗ್ಯ, ಟಿ. ಅನಸೂಯಮ್ಮ, ಮುಖ್ಯ ಕಾರ್ಯನಿರ್ವಾಹಕ ಎಸ್.ಸದಾಶಿವಯ್ಯ, ಹಾಲು ಪರೀಕ್ಷಕ ಬಸವರಾಜು, ಸಹಾಯಕ ಷಣ್ಮುಖ, ಗುರುವನಹಳ್ಳಿ ಡೇರಿ ನಿರ್ದೇಶಕ ಜಿ. ರಾಜಗೋಪಾಲ್, ಬಮುಲ್ ಸಂಸ್ಥೆ ವಿಸ್ತರಣಾಧಿಕಾರಿ ರಮೇಶ್, ಮುಖಂಡ ಗಂಗರಾಜಪ್ಪ ಮತ್ತಿತರರು ಇದ್ದರು.