

ಕಿರುವಾರ ಸುದರ್ಶನ್ ಕೋಲಾರ
ತೋಟದಲ್ಲಿ ಬೆಳೆ ಉತ್ಕಕೃಷ್ಟವಾಗಿದ್ದರೂ ಮಾರುಕಟ್ಟೆಯಲ್ಲಿ ಬಾಳೆ ಬೆಲೆ ಪಾತಾಳಕ್ಕೆ ಕುಸಿದಿರುವ ಪರಿಣಾಮ ಬೆಳೆಗಾರರು ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ.
ತೋಟದಲ್ಲೇ ಪಚ್ಚೆ ಬಾಳೆ ಕೆಜಿ 6 ರಿಂದ 8 ರೂ.ಗೆ ಹಾಗೂ ಏಲಕ್ಕಿ ಬಾಳೆ ಕೆಜಿ 12 ರಿಂದ 20 ರೂ.ಗೆ ಮಾರಾಟವಾಗುತ್ತಿದೆ. ಆದರೆ ಮಾರುಕಟ್ಟೆ ದರಕ್ಕೂ, ವ್ಯಾಪಾರಸ್ಥರು ಕೇಳುತ್ತಿರುವ ದರಕ್ಕೂ ಅಜಗಜಾಂತರ ವ್ಯತ್ಯಾಸವಿದೆ.
ಕೃಷಿಯಲ್ಲಿ ಒಂದಷ್ಟು ಬದಲಾವಣೆ ಬಯಸಿರುವ ಜಿಲ್ಲೆಯ ರೈತರು ತೋಟಗಾರಿಕೆ ಬೆಳೆಯಲ್ಲೇ ಬದಲಾವಣೆ ಮಾಡುತ್ತಿದ್ದು, ಹಲವರು ಬಾಳೆ ಬೆಳೆದಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 96,805 ಹೆಕ್ಟೇರ್ ತೋಟಗಾರಿಕೆ ಬೆಳೆ ಪ್ರದೇಶವಿದ್ದು, ಆ ಪೈಕಿ 48,629 ಹೆಕ್ಟೇರ್ನಲ್ಲಿ ಹಣ್ಣು, 40,571 ಹೆಕ್ಟೇರ್ನಲ್ಲಿ ತರಕಾರಿ ಹಾಗೂ 1,141 ಹೆಕ್ಟೇರ್ನಲ್ಲಿ ಹೂವು ಸೇರಿ ಇತರ ಬೆಳೆ ಬೆಳೆಯಲಾಗುತ್ತಿದೆ.
ಈ ಭಾಗದಲ್ಲಿ ಹೆಚ್ಚಾಗಿ ಟೊಮ್ಯಾಟೊಪ್ರಮುಖವಾಗಿತ್ತು. ಆದರೆ, ಅಂಗಮಾರಿ, ಹೂಜಿ ರೋಗ ಕಾಣಿಸಿಕೊಂಡು ನಿಯಂತ್ರಣ ಮಾಡಲು ಸಾಧ್ಯವಾಗದ ಕಾರಣ ಕೆಲ ರೈತರು ಬದಲಾವಣೆ ಬಯಸಿ ದಾಳಿಂಬೆ, ಬಾಳೆ ಬೆಳೆಯತ್ತ ಮುಖ ಮಾಡಿದ್ದಾರೆ.
ಸದ್ಯ ಜಿಲ್ಲೆಯಲ್ಲಿ ಮಾವು, ಟೊಮ್ಯಾಟೊ ನಂತರ ಬಾಳೆ ಬೆಳೆ ಪ್ರಮುಖವಾಗಿಸಿದೆ. ಆದರೆ, ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕೊರತೆ, ಬೇಡಿಕೆ ಕುಸಿತದಿಂದಾಗಿ ಬಾಳೆ ಬೆಳೆಗಾರರು ತೀವ್ರ ನಷ್ಟಕ್ಕೆ ಒಳಗಾಗುವಂತಾಗಿದೆ. ಜಿಲ್ಲೆಯಲ್ಲಿ ಒಟ್ಟು 150 ಹೆಕ್ಟೇರ್ನಲ್ಲಿ 250 ರೈತರು ಬಾಳೆ ಬೆಳೆದಿದ್ದಾರೆ.
ದುಂಬಾಲು ಬೀಳುವ ದುಸ್ಥಿತಿ
ಮಾರುಕಟ್ಟೆಯಲ್ಲಿ ಬೆಲೆ ಕುಸಿದಿದ್ದರೂ ಬಾಳೆ ಕೇಳೋರೇ ಇಲ್ಲದಂತಾಗಿದೆ. ಕನಿಷ್ಠ ಬೆಲೆಗಾದರೂ ಬಾಳೆ ಕಟಾವು ಮಾಡಿಕೊಂಡು ಹೋಗುವಂತೆ ಬೆಳೆಗಾರರು ಮಾರಾಟಗಾರರಿಗೆ ದುಂಬಾಲು ಬೀಳುವ ದುಸ್ಥಿತಿ ಬಂದಿದೆ.
ಬೆಳೆಗಾರರೇ ಕಟಾವು ಮಾಡಿ ನೇರವಾಗಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಲು ಜಿಲ್ಲೆಯಲ್ಲಿ ಸೂಕ್ತ ಮಾರುಕಟ್ಟೆ ವ್ಯವಸ್ಥೆಯಿಲ್ಲ.
ಶೀತಲೀಕರಣ ಟಕ ಅಗತ್ಯ
ಹಣ್ಣುಗಳು ಸೇರಿ ತೋಟಗಾರಿಕೆ ಬೆಳೆಯ ಕ್ಷೇತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬೆಳೆಯನ್ನು ಬಹಳಷ್ಟು ದಿನಗಳವರೆಗೆ ಇಟ್ಟು ಮಾರಾಟ ಮಾಡಲು ಶೀತಲೀಕರಣ ಘಟಕದ ಅಗತ್ಯವಿದೆ ಎಂಬ ಕೂಗು ಕೇಳುತ್ತಿದೆ.
ಆ ಮೂಲಕ ಕನಿಷ್ಠ ತಿಂಗಳ ಮಟ್ಟಿಗಾದರೂ ಶೀತಲೀಕರಣ ಘಟಕದಲ್ಲಿಟ್ಟು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಬಂದ ಮೇಲೆ ಮಾರಾಟ ಮಾಡಲು ಅನುಕೂಲವಾಗುತ್ತದೆ ಎಂಬ ಒತ್ತಾಯ ಬೆಳಗಾರರದಾಗಿದೆ.
ಎಕರೆಗೆ 1.5 ಲಕ್ಷ ರೂ. ಖರ್ಚು
ಒಂದು ಎಕರೆ ಬಾಳೆ ನಾಟಿ ಮಾಡುವುದರಿಂದ ಹಿಡಿದು ಕೊಯ್ಲು ಬರುವ ತನಕ ಸುಮಾರು 1.5 ಲಕ್ಷ ರೂ. ವೆಚ್ಚವಾಗುತ್ತದೆ. ಮಾರುಕಟ್ಟೆಯಲ್ಲಿ ಬಾಳೆಗೆ ಬೇಡಿಕೆ ಇಲ್ಲದೆ ಇರುವುದರಿಂದ ಖರ್ಚು ಮಾಡಿದ ಅರ್ಧದಷ್ಟು ಹಣ ಕೂಡ ಬರುವ ನಿರೀೆಯಿಲ್ಲ ಎಂದು ಕೃಷಿಕ ಹರಟಿ ಬಾಬು ತಿಳಿಸಿದರು. ಬೆಳೆ ಕಟಾವಿಗೆ ಬಂದಿದ್ದು, ವ್ಯಾಪಾರಸ್ಥರು ಕೇಳುವ ಬೆಲೆ ಕೊಡಬೇಕು. ಒಂದು ವೇಳೆ ಖರೀದಿ ಮಾಡಿದರೂ ಗಿಡದಿಂದ ನಾವೇ ಕಟಾವು ಮಾಡಿಕೊಡಬೇಕಾದ ಪರಿಸ್ಥಿತಿ ಇದೆ ಎಂದು ತಿಳಿಸಿದರು.
ಮೂವರು ರೈತರಿಂದ ಬೆಳೆ ನಾಶ
ಜಿಲ್ಲೆಯಲ್ಲಿ ಒಟ್ಟು 150 ಹೆಕ್ಟೇರ್ ಪ್ರದೇಶದಲ್ಲಿ 250 ಬೆಳೆಗಾರರು ಪಚ್ಚ ಮತ್ತು ಏಲಕ್ಕಿ ತಳಿ ಬಾಳೆ ಬೆಳೆದಿದ್ದಾರೆ. ಆ ಪೈಕಿ ಕೆಜಿಎ್, ಬಂಗಾರಪೇಟೆ ತಾಲೂಕು ಭಾಗದ ರೈತರು ಹೆಚ್ಚು ಬಾಳೆ ಬೆಳೆಯುವವರಿದ್ದಾರೆ. ಬೆಲೆ ಕುಸಿತದಿಂದ ಒಂದೇ ತಿಂಗಳಲ್ಲಿ ಮೂವರು ರೈತರು ಬೆಳೆ ನಾಶ ಪಡಿಸಿದ್ದಾರೆ.
"ಡಿಸೆಂಬರ್ನಲ್ಲಿ ಶೀತ ಹೆಚ್ಚಾಗಿರುವುದರಿಂದ ಬಾಳೆ ಹಣ್ಣಿಗೆ ಬೆಲೆ ಕಡಿಮೆಯಾಗಿದೆ. ಮುಂದಿನ 15 ದಿನದಲ್ಲಿ ಬೆಲೆ ಸಿಗುತ್ತದೆ. ಅಲ್ಲಿಯ ತನಕ ರೈತರು ಬೆಳೆ ರಸಬೇಕು."
- ಹೆಸರು ಹೇಳಲಿಚ್ಚಿಸದ ತೋಟಗಾರಿಕೆ ಇಲಾಖೆ ಅಧಿಕಾರಿ
"ಮೂರು ಎಕರೆಯಲ್ಲಿ ಬಾಳೆ ಬೆಳೆ ಬೆಳೆದಿದ್ದು ಮಾರುಕಟ್ಟೆಯಲ್ಲಿ ಬೇಡಿಕೆಯಿಲ್ಲದೆ ಬೆಲೆಯು ಕುಸಿದಿದೆ. ಬೆಳೆ ತೆಗೆಯಲು ಹಾಕಿರುವ ಬಂಡವಾಳ ಬರುವ ನಿರೀೆಯೂ ಇಲ್ಲದಂತಾಗಿದೆ. ಇದರಿಂದಾಗಿ ಬೆಳೆ ನಾಶ ಪಡಿಸಲಾಗಿದೆ."
- ಕೆ.ವೈ.ಗಣೇಶ್ಗೌಡ, ಕೋಟಿಗಾನಹಳ್ಳಿ ರೈತ