

ಮೈಸೂರು: ಆಹಾರ ಉತ್ಪಾದನೆಯಲ್ಲಿ ಗಣನೀಯ ಪ್ರಗತಿ ಸಾಧಿಸಿದರೂ ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಈಗಲೂ ದೊರೆಯುತ್ತಿಲ್ಲ ಎಂದು ಕೃಷಿ ಇಲಾಖೆಯ ಮಂಡ್ಯ ಜಂಟಿ ನಿರ್ದೇಶಕ ವಿ.ಎಸ್.ಅಶೋಕ್ ಹೇಳಿದರು.
ಆಕಾಶವಾಣಿ ಮೈಸೂರು, ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯ (ಸಿಎಫ್‌ಟಿಆರ್‌ಐ), ಮೈವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಮಂಡ್ಯದ ವಿಕಸನ ಗ್ರಾಮೀಣ ಹಾಗೂ ನಗರಾಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ‘ನಮ್ ಕಂಪನಿ; ರೈತನ ಉತ್ಪಾದಕ ಸಂಸ್ಥೆಗಳ ಸಬಲೀಕರಣ’ ಬಾನುಲಿ ಸರಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
140 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಆಹಾರ ಉತ್ಪಾದನೆಯಲ್ಲಿ ಗಮನಾರ್ಹ ಸಾಧನೆಯಾಗಿದೆ. ಆದರೆ, ಇದಕ್ಕೆ ಕಾರಣರಾಗಿರುವ ರೈತರ ಆದಾಯ, ಜೀವನಮಟ್ಟದಲ್ಲಿ ಪ್ರಗತಿ ಕಂಡಿಲ್ಲ. ಸೂಕ್ತ ಕೃಷಿ ಬೆಲೆ ಸಿಗುತ್ತಿಲ್ಲ. ರೈತರ ಮೂಲ ಸಮಸ್ಯೆಗಳೂ ಬಗೆಹರಿದಿಲ್ಲ. ಅದಕ್ಕಾಗಿ ಹೋರಾಟ ನಿರಂತರವಾಗಿ ಮುಂದುವರಿದಿದೆ ಎಂದರು.
ರೈತರು ಆರ್ಥಿಕವಾಗಿ ಸದೃಢವಾಗಬೇಕು. ಆಹಾರದ ಗುಣಮಟ್ಟ, ಪೋಷಾಕಾಂಶಗಳ ಕುರಿತು ಗಮನ ನೀಡಬೇಕು. ರೈತರಿಗೆ ಕಡಿಮೆ ಬೆಲೆಗೆ ಕೃಷಿ ಪರಿಕರ ನೀಡಬೇಕಿದೆ. ಕೃಷಿ ಬೆಳೆಗಳು ದಲ್ಲಾಳಿಗಳ ಹಾವಳಿವಿಲ್ಲದೆ ನೇರವಾಗಿ ಗ್ರಾಹಕರಿಗೆ ದೊರೆಯಬೇಕು ಎಂದರು.
ಆಕಾಶವಾಣಿ ಮೈಸೂರು ಉಪನಿರ್ದೇಶಕ ಎಸ್.ಎಸ್.ಉಮೇಶ್ ಮಾತನಾಡಿ, ರೈತನ ಉತ್ಪಾದಕ ಸಂಸ್ಥೆಗಳ ಸಬಲೀಕರಣ ಕುರಿತು ಬಾನುಲಿ ಸರಣಿ 52 ವಾರಗಳ ಕಾಲ ಆಕಾಶವಾಣಿ ಮೈಸೂರು ಮೂಲಕ ಬಿತ್ತರವಾಗಲಿದೆ ಎಂದರು.
ಕೊಡಗು ವಿವಿ ಕುಲಪತಿ ಡಾ.ಅಶೋಕ್ ಆಲೂರು ಅವರು ಆನ್‌ಲೈನ್ ಮೂಲಕ ಆಶಯ ಭಾಷಣ ಮಾಡಿದರು. ಸಿಎಫ್‌ಟಿಆರ್‌ಐ ನಿರ್ದೇಶಕಿ ಡಾ.ಶ್ರೀದೇವಿ ಅನ್ನಪೂರ್ಣ ಸಿಂಗ್, ಮೈವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಪ್ರೊ.ಎಂ.ಎಸ್.ಸ್ವಪ್ನಾ, ನಬಾರ್ಡ್ ಮಂಡ್ಯ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕಿ ಬಿ.ವಿ.ಹರ್ಷಿತಾ, ಆಕಾಶವಾಣಿ ಕೃಷಿರಂಗ ಕಾರ್ಯಕ್ರಮ ನಿರ್ವಾಹಕ ಎನ್.ಕೇಶವಮೂರ್ತಿ, ವಿಕಸನ ಸಂಸ್ಥೆ ಗೌರವ ಅಧ್ಯಕ್ಷ ಪ್ರೊ.ಆರ್.ಎಲ್.ಜಗದೀಶ್ ಇನ್ನಿತರರಿದ್ದರು.