

ಅವಿನಾಶ್ ಜೈನಹಳ್ಳಿ ಮೈಸೂರು
ಮಳೆಯ ತೀವ್ರ ಕೊರತೆಯಿರುವ ಜಿಲ್ಲೆಯ 9 ತಾಲೂಕುಗಳನ್ನು ರಾಜ್ಯ ಸರ್ಕಾರ ಬರಪೀಡಿತ ಎಂಬುದಾಗಿ ಘೋಷಣೆ ಮಾಡಿದೆ. ಹಾಗಾಗಿ, ಬೆಳೆ ನಷ್ಟ ಅನುಭವಿಸಿದ ರೈತರಿಗೆ ಸರ್ಕಾರದ ಪರಿಹಾರ ಕಾರ್ಯಗಳಿಂದ ನೆರವು ಸಿಗುವ ನಿರೀಕ್ಷೆ ಮೂಡಿದೆ.
ಕೃಷಿ ಮತ್ತು ಕಂದಾಯ ಇಲಾಖೆ ನಡೆಸಿದ ಜಂಟಿ ಸಮೀಕ್ಷೆಯಲ್ಲಿ ಬರದ ತೀವ್ರತೆ ದೃಢಪಟ್ಟಿದೆ. ಬೆಳೆನಷ್ಟ, ರೈತರ ಸ್ಥಿತಿ, ಮೇವು ಹಾಗೂ ನೀರಿನ ಲಭ್ಯತೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಸಲ್ಲಿಸಿದ ವರದಿ ಆಧರಿಸಿ ಸರ್ಕಾರ ನಿರ್ಧಾರ ಕೈಗೊಂಡಿದೆ. ಪರಿಹಾರ ಕಾರ್ಯಗಳನ್ನು ತ್ವರಿತಗತಿಯಲ್ಲಿ ಕೈಗೆತ್ತಿಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.
ಜಿಲ್ಲೆಯ ಎಲ್ಲ ತಾಲೂಕುಗಳನ್ನು ಸರ್ಕಾರ ಬರಪೀಡಿತ ಎಂದು ಘೋಷಿಸಿದೆ. ಆರು ತಿಂಗಳಿನಿಂದ ಮಳೆಯನ್ನೇ ನಂಬಿಕೊಂಡು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ರೈತರಿಗೆ ಸತತವಾಗಿ ಪೂರ್ವ ಮುಂಗಾರು, ಮುಂಗಾರು, ಪೂರ್ವ ಹಿಂಗಾರು ಮತ್ತು ಹಿಂಗಾರು ಕೈ ಕೊಟ್ಟಿದೆ. ವಾಡಿಕೆಯಷ್ಟು ಮಳೆಯಾಗದೆ ಶೇ.33ರಷ್ಟು ಬೆಳೆ ನಷ್ಟ ಅನುಭವಿಸಿದ್ದಾರೆ. ಎರಡು ವರ್ಷ ಅತಿವೃಷ್ಟಿಯಿಂದಾಗಿ ಬೆಳೆ ನಷ್ಟ ಅನುಭವಿಸಿದ್ದ ರೈತರು, ಈ ಬಾರಿ ಬರದಿಂದ ಕಂಗಾಲಾಗಿದ್ದಾರೆ.
ಜಿಲ್ಲೆಯ ಒಟ್ಟು 2,49,483 ಹೆಕ್ಟೇರ್ ಮಳೆಯಾಶ್ರಿತ ಕೃಷಿ ಪ್ರದೇಶದಲ್ಲಿ ರೈತರು ಬಿತ್ತನೆ ಕಾರ್ಯ ಮಾಡಿದ್ದು, ಅದರಲ್ಲಿ 82,659 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಮಳೆಯಿಂದಾಗಿ ಕೈ ಕೊಟ್ಟಿದೆ. ಇದರಿಂದಾಗಿ ರೈತರಿಗೆ ಬರೋಬ್ಬರಿ 555.16 ಕೋಟಿ ರೂ. ನಷ್ಟವಾಗಿದೆ ಎಂದು ಕೃಷಿ ಇಲಾಖೆ ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ಕಳೆದ ವರ್ಷ ವಾಡಿಕೆಗಿಂತ ಅಧಿಕ ಮಳೆಯಿಂದಾಗಿ ಕೈಗೆ ಸಿಗಬೇಕಾದ ಬೆಳೆ ಮಣ್ಣು ಪಾಲಾಗಿದೆ. ಅತಿವೃಷ್ಟಿಯಿಂದಾಗಿ 1267.21 ಹೆಕ್ಟೇರ್‌ನಲ್ಲಿ ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ನೀರಾವರಿ ಪ್ರದೇಶದಲ್ಲಿನ ಬಿತ್ತನೆ ಸೇರ್ಪಡೆಯಾದರೆ ಬೆಳೆ ನಷ್ಟ ಪ್ರಮಾಣ ಶೇ. 22ರಷ್ಟು ಮಾತ್ರ ಆಗಲಿದೆ. ನೀರಾವರಿ ಪ್ರದೇಶದಲ್ಲಿ ಕೆರೆ, ಕಾಲುವೆ ಮತ್ತು ಬೋರ್‌ವೆಲ್‌ನಿಂದ ಕೃಷಿಗೆ ನೀರು ಪೂರೈಕೆಯಾಗುತ್ತಿರುವುದರಿಂದ ಬೆಳೆ ನಷ್ಟ ಪ್ರಮಾಣ ಅಷ್ಟು ಇಲ್ಲ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.
ಮೈಸೂರು ಜಿಲ್ಲೆಯಲ್ಲಿ ನೀರಾವರಿ ಪ್ರದೇಶ ವ್ಯಾಪ್ತಿಯಲ್ಲಿ ಶೇ. 78ರಷ್ಟು ಮಾತ್ರ ಬಿತ್ತನೆಯಾಗಿದ್ದರೆ, ಮಳೆಯಾಶ್ರಿತ ಪ್ರದೇಶದಲ್ಲಿ ನಿರೀಕ್ಷೆಗೂ ಮೀರಿ ಶೇ. 102ರಷ್ಟು ಬಿತ್ತನೆಯಾಗಿದೆ. ಆದರೆ, ಮಳೆಯಾಶ್ರಿತ ಪ್ರದೇಶದಲ್ಲಿ ಉಂಟಾದ ಮಳೆ ಕೊರತೆಯಿಂದಾಗಿ ಶೇ. 33ರಷ್ಟು ಬೆಳೆ ನಷ್ಟವಾಗಿದೆ.
ಮೈಸೂರು ಜಿಲ್ಲೆಯಲ್ಲಿ 2023ರ ಜ.1ರಿಂದ ಸೆ.30ವರೆಗೆ 623.7 ಮಿ.ಮೀ.ನಷ್ಟು ವಾಡಿಕೆ ಮಳೆಯಾಗಬೇಕಿತ್ತು. ಆದರೆ, 474.1ರಷ್ಟು ಮಾತ್ರ ಮಳೆಯಾಗಿದ್ದು, 149.1 ಮಿ.ಮೀ. ಮಳೆ ಕೊರತೆಯಾಗಿದೆ. ಕಳೆದ 2022ರಲ್ಲಿ ವಾಡಿಕೆ ಮಳೆ 623.7 ಮಿ.ಮೀ. ಇದ್ದರೆ ಬರೋಬ್ಬರಿ 1009.3 ಮಿ.ಮೀ. ಮಳೆಯಾಗಿತ್ತು. ಅಂದರೆ ಮಿತಿಗಿಂತ ಶೇ.62ರಷ್ಟು ಹೆಚ್ಚು ಮಳೆಯಾಗಿದ್ದು, ಮಳೆಯೇ ಕೈಗೆ ಸಿಕ್ಕ ಬೆಳೆ ಹಾಳಾಗಲು ಕಾರಣವಾಗಿತ್ತು.
ಜಿಲ್ಲೆಯ ರೈತರು ಕೃಷಿ ಇಲಾಖೆಯಿಂದ 2023-24ನೇ ಸಾಲಿನಿ ಮುಂಗಾರು ಹಂಗಾಮಿನ ಬೆಳೆ ನಷ್ಟ ಪರಿಹಾರ ಪಡೆಯಲು ಹಾಗೂ ಹಲವು ಯೊಜನೆ ಲಾಭ ಪಡೆಯಬೇಕಾದರೆ ಫ್ರೂಟ್ಸ್ ಐಡಿ(ಎಫ್‌ಐಡಿ) ಮಾಡಿಸುವುದು ಕಡ್ಡಾಯವಾಗಿದೆ. ರೈತರು ತಪ್ಪದೇ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ, ಐಡಿ ಮಾಡಿಸಬೇಕು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ.ಎಸ್.ಚಂದ್ರಶೇಖರ್ ಹೇಳಿದ್ದಾರೆ.
ರೈತ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ, ಅಂತರ್ಜಾಲ ಆಧಾರಿತ ತಂತ್ರಾಂಶ ವ್ಯವಸ್ಥೆಯಾಗಿದೆ. ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ರೈತರಿಗೆ ಅನುಕೂಲವಾಗುತ್ತದೆ. ಫಲಾನುಭವಿಗಳು ಪಡೆಯುವ ಪ್ರಯೋಜನಗಳ ವಿವರಗಳನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸಲಾಗುತ್ತದೆ. ಇದು ರೈತರು, ಭೂಮಿ ಮತ್ತು ಅವರಿಗೆ ವಿಸ್ತರಿಸಿದ ಪ್ರಯೋಜನಗಳ ಸಮಗ್ರ ವಿವರಗಳನ್ನೊಳಗೊಂಡ ಏಕೀಕೃತ ದತ್ತಾಂಶವಾಗಿರುತ್ತದೆ ಎಂದು ತಿಳಿಸಿದ್ದಾರೆ.
ರೈತರು, ಠಿಠಿ://್ಛ್ಟ್ಠಜಿಠಿ.ಚ್ಟ್ಞಠಿ.ಜಟ.ಜ್ಞಿ ಮೂಲಕ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ರೈತರು, ನಾಗರಿಕ ಪ್ರವೇಶ(ಇಜಿಠಿಜ್ಢಿಛ್ಞಿ ಔಟಜಜ್ಞಿ)ಗೆ ಭೇಟಿ ನೀಡಿ ಅವಶ್ಯ ದಾಖಲೆ ಒದಗಿಸಿ ಸ್ವಯಂ ನೋಂದಣಿ ಮಾಡಿಕೊಳ್ಳಬಹುದು. ಆಧಾರ್ ಸಂಖ್ಯೆ ಮತ್ತು ಹೆಸರು, ಜಮೀನಿನ ವಿವರ ದಾಖಲಿಸಬೇಕು. ಸಂಬಂಧಪಟ್ಟ ಅನುಮೋದನಾ ಅಧಿಕಾರಿಯು ಅನುಮೋದಿಸಿದ ನಂತರ, ನೋಂದಣಿ ಪೂರ್ಣಗೊಳ್ಳುತ್ತದೆ.
ಮೈಸೂರು ಜಿಲ್ಲೆಯ ಎಲ್ಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದ್ದು, 555.16 ಕೋಟಿ ರೂ. ಬೆಳೆ ನಷ್ಟವಾಗಿದೆ ಎಂದು ತಾಲೂಕುವಾರು ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಕಳೆದ ಬಾರಿ ಅತಿವೃಷ್ಟಿಯಿಂದಲೂ ಅಲ್ಪ ಪ್ರಮಾಣದಲ್ಲಿ ನಷ್ಟವಾಗಿದೆ.ಡಾ.ಬಿ.ಎಸ್.ಚಂದ್ರಶೇಖರ್ ಜಂಟಿ ನಿರ್ದೇಶಕ, ಕೃಷಿ ಇಲಾಖೆ