ಕಬ್ಬಿನತ್ತ ರೈತರ ಚಿತ್ತ

Sugercane Field in Haliyala
Published on

ಸುಭಾಸ ಧೂಪದಹೊಂಡ ಕಾರವಾರ
ಜಿಲ್ಲೆಯ ಅರೆ ಮಲೆನಾಡಿನ ಭಾಗದಲ್ಲಿ ಭತ್ತ, ಜೋಳ ಮುಂತಾದ ಸಾಂಪ್ರದಾಯಿಕ ಬೆಳೆಗಳಿಂದ ರೈತರು ಕಬ್ಬಿನ ಬೆಳೆಗೆ ಸ್ಥಳಾಂತರವಾಗುತ್ತಿದ್ದಾರೆ.

ಜಿಲ್ಲೆಯ ಹಳಿಯಾಳ, ಮುಂಡಗೋಡ ಭಾಗದ ರೈತರು ಈ ಹಿಂದೆ ಒಣ ಬಿತ್ತನೆ, ನಾಟಿ ಸ್ವರೂಪದಲ್ಲಿ ಭತ್ತ ಬೆಳೆಯುತ್ತಿದ್ದರು. ಮಳೆ ಕಡಿಮೆಯಾದರೆ ಜೋಳ ಬೆಳೆಯುತ್ತಿದ್ದರು.

ಇತ್ತೀಚಿನ ವರ್ಷದಲ್ಲಿ ಕೆಲವರು ಹತ್ತಿಯನ್ನೂ ಬೆಳೆದು ನೋಡಿದರು. ಈಗ ಭತ್ತ, ಜೋಳ, ಹತ್ತಿ ಬೆಳೆಯ ವ್ಯಾಪ್ತಿ ತೀರ ಕಡಿಮೆಯಾಗಿದೆ. ರೈತರು ಕಬ್ಬನ್ನು ನಂಬಿದ್ದಾರೆ.


2017 ರಲ್ಲಿ ಜಿಲ್ಲೆಯ ಹಳಿಯಾಳ, ಮುಂಡಗೋಡ, ಯಲ್ಲಾಪುರದ ಒಂದು ಭಾಗ ಹಾಗೂ ದಾಂಡೇಲಿ ತಾಲೂಕುಗಳ ವ್ಯಾಪ್ತಿಯಲ್ಲಿ 14,399 ಹೆಕ್ಟೇರ್ ಕಬ್ಬಿನ ಬೆಳೆ ಇತ್ತು.

ಕೃಷಿ ಇಲಾಖೆಯ ಅಂದಾಜಿನ ಪ್ರಕಾರ ಈ ಬಾರಿ (2023-24) ಆ ವ್ಯಾಪ್ತಿ 33,155 ಹೆಕ್ಟೇರ್‌ಗೆ ಏರಿಕೆಯಾಗುವ ಸಾಧ್ಯತೆ ಇದೆ.

ಈ ಅವಧಿಯಲ್ಲಿ ಪ್ರಮುಖವಾಗಿ ಭತ್ತದ ಬೆಳೆ ಸುಮಾರು 1 ಸಾವಿರ ಹೆಕ್ಟೇರ್ ಕಡಿಮೆಯಾಗಿದೆ. ಹತ್ತಿ ಬೆಳೆ ಸುಮಾರು 600 ಹೆಕ್ಟೇರ್ ಇಳಿಕೆಯಾಗಿದೆ. ಜೋಳದ ಬೆಳೆಯೂ ಸುಮಾರು 3 ಸಾವಿರ ಹೆಕ್ಟೇರ್ ಇಳಿಕೆಯಾಗಿದೆ.

ಇಷ್ಟು ವರ್ಷ ಹಳಿಯಾಳದಲ್ಲಿ ಮಾತ್ರ ಸಕ್ಕರೆ ಕಾರ್ಖಾನೆ ಇತ್ತು. ಈಗ ಮುಂಡಗೋಡಿನ ಗಡಿ ಭಾಗದಲ್ಲಿ ಇನ್ನೊಂದು ಸಕ್ಕರೆ ಕಾರ್ಖಾನೆಯಾಗಿದ್ದರಿಂದ ಈ ಪ್ರದೇಶ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಮುಂಡಗೋಡ ಭಾಗದಲ್ಲಿ ಭತ್ತ ಬಿಟ್ಟು ಅಡಕೆ ತೋಟ ಹಚ್ಚಿದವರ ಪ್ರಮಾಣವೂ ಹೆಚ್ಚಿದೆ.

ಕಾರಣವೇನು..?

ಭತ್ತದ ಬೆಳೆಯಲ್ಲಿ ಲಾಭ ಕಡಿಮೆ. ಶ್ರಮ ಜಾಸ್ತಿ, ಮಳೆ ಆಗದಿದ್ದರೆ, ಹೆಚ್ಚಾದರೂ ಸಂಪೂರ್ಣ ನಷ್ಟವಾಗುತ್ತದೆ. ಜೋಳದಲ್ಲೂ ಲಾಭ ಕಡಿಮೆ. ಇತ್ತೀಚಿನ ಕೆಲ ವರ್ಷಗಳಲ್ಲಿ ಬಂದ ಬಿಟಿ ಹತ್ತಿಯೂ ರೈತರ ಕೈ ಹಿಡಿಯಲಿಲ್ಲ. ಕೆಲ ವರ್ಷಗಳ ಹಿಂದೆ ಪ್ರಾರಂಭವಾದ ಕಬ್ಬಿನ ಕಾರ್ಖಾನೆ ರೈತರು ಸಕ್ಕರೆ ಕಬ್ಬನ್ನು ಹೆಚ್ಚು ಬೆಳೆಯಲು ಪ್ರಮುಖ ಕಾರಣ. ಕಬ್ಬು ವಾರ್ಷಿಕ ಬೆಳೆ. ಹೆಚ್ಚು ಆರೈಕೆ ಬಯಸುವುದಿಲ್ಲ. ಸಂಸ್ಕರಣೆ, ಮುಂತಾದ ಕೆಲಸವಿಲ್ಲ. ಕಟಾವು ಮಾಡಿ ಕಾರ್ಖಾನೆಗೆ ಸಾಗಿಸಿದ ನಂತರ ಒಮ್ಮೆಲೇ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತದೆ ಎಂಬ ಕಾರಣಕ್ಕೂ ರೈತರು ಹೆಚ್ಚು ಕಬ್ಬಿನ ಬೆಳೆಯತ್ತ ಪರಿವರ್ತನೆಯಾಗುತ್ತಿದ್ದಾರೆ. ಎನ್ನುತ್ತಾರೆ ರೈತರೊಬ್ಬರು.

ಹಳಿಯಾಳದಲ್ಲಿ ಕಬ್ಬು ಬೆಳೆಯುವ ಪ್ರದೇಶ ಹೆಚ್ಚಿದೆ. ಕಬ್ಬು ಒಳ್ಳೆಯ ಬೆಳೆಯಾದರೂ ರೈತರ ಹಿತ ದೃಷ್ಟಿಯಿಂದ ಮಿಶ್ರ ಬೆಳೆ ಬೆಳೆಯುವುದು ಉತ್ತಮ. ಒಂದು ಬೆಳೆ ನಷ್ಟವಾದರೂ ಇನ್ನೊಂದು ಬೆಳೆ ಕೈ ಹಿಡಿಯುತ್ತದೆ. ರೈತರು ಸಾಲದಲ್ಲಿ ಮುಳುಗುವ ಸಾಧ್ಯತೆ ತಪ್ಪುತ್ತದೆ.ಪಿ.ಐ. ಮಾನೆಕೃಷಿ ಇಲಾಖೆ ಸಹಾಯಕ ನಿರ್ದೇಶಕಹಳಿಯಾಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net