ಸಂಘಟನೆ ಕೊರತೆಯಿಂದ ಶೋಷಣೆಗೊಳಗಾಗುತ್ತಿರುವ ರೈತರು

12
Published on

ಮೈಸೂರು: ಸಂಘಟನೆ ಕೊರತೆಯಿಂದಾಗಿ ರೈತರು ಶೋಷಣೆಗೆ ಗುರಿಯಾಗುತ್ತಿದ್ದಾರೆ. ಅದಕ್ಕಾಗಿ ರೈತ ಉತ್ಪಾದಕ ಸಂಸ್ಥೆಗಳು ರೈತರಿಗೆ ಸಹಕಾರಿಯಾಗಿ ಕಾರ್ಯನಿರ್ವಹಿಸಲಿ ಎಂದು ನರ್ಬಾಡ್ ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಕ ವ್ಯವಸ್ಥಾಪಕ ಟಿ.ರಮೇಶ್ ಸಲಹೆ ನೀಡಿದರು.

ಬಂಡಿಪಾಳ್ಯದಲ್ಲಿರುವ ರೈತಮಿತ್ರ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಆವರಣದಲ್ಲಿ ಸೋಮವಾರ ಮೊಬೈಲ್ ವ್ಯಾನ್ ಮೂಲಕ ರೈತರ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನರ್ಬಾಡ್ ಸಂಸ್ಥೆ ಬಹಳಷ್ಟು ನೆರವು ನೀಡಿ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಿದೆ. ಜತೆಗೆ ರೈತ ಉತ್ಪಾದಕ ಸಂಸ್ಥೆಗಳಿಗೆ ಹೆಚ್ಚಿನ ನೆರವು ನೀಡಿ ರೈತರು ಸ್ವಾವಲಂಬಿಗಳಾಗಲು ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.

ರಾಜ್ಯದಲ್ಲಿ 381 ನಬಾರ್ಡ್ ಸಹಕಾರದ ರೈತ ಉತ್ಪಾದಕ ಸಂಸ್ಥೆಗಳು, ರಾಜ್ಯ ಸರ್ಕಾರದ 800 ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಹೆಚ್ಚು ವಹಿವಾಟು ನಡೆಸುವ ಸಂಸ್ಥೆಗಳು ಕೇವಲ ಐವತ್ತು ಮಾತ್ರ. ಅದರಲ್ಲಿ ರೈತ ಮಿತ್ರ ಉತ್ಪಾದಕ ಸಂಸ್ಥೆ ಉತ್ತಮವಾಗಿ ಮುನ್ನಡೆಯುತ್ತಿದೆ ಎಂದು ಪ್ರಶಂಸಿಸಿದರು.
ರೈತಮಿತ್ರ ಉತ್ಪಾದಕ ಸಂಸ್ಥೆ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ದೇಶದಲ್ಲಿ 13 ಸಾವಿರ ರೈತ ಉತ್ಪಾದಕ ಸಂಸ್ಥೆಗಳು ಲಕ್ಷಾಂತರ ಕೋಟಿ ರೂ. ವಿನಿಯೋಗಿಸಿವೆ. ಸಹಕಾರಿ ಕೃಷಿಯನ್ನೇ ಹೋಲುವ ರೈತ ಉತ್ಪಾದಕ ಸಂಸ್ಥೆಗಳ ಹಿಡಿತ ಹಾಗೂ ಪ್ರಾಯೋಜಕತ್ವ ದೊಡ್ಡ ದೊಡ್ಡ ಕಂಪನಿಗಳ ಹಿಡಿತಕ್ಕೆ ಸಿಲುಕಬಾರದು. ರೈತರು ಜಾತಿ, ಪಕ್ಷ ರಾಜಕಾರಣ ದೂರ ಇಟ್ಟು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ಸಲಹೆ ನೀಡಿದರು.

ಕಳೆದ ಎರಡು-ಮೂರು ವರ್ಷಗಳ ಹಿಂದೆ ಕರೊನಾ ಸಂಕಷ್ಟದಿಂದಾಗಿ ಮತ್ತು ಕೇರಳ ರಾಜ್ಯಕ್ಕೆ ತರಕಾರಿ ಪೂರೈಕೆಯಲ್ಲಿನ ಹಣದ ಮರುಪಾವತಿಯಿಂದ ಕಂಪನಿ ಸಂಕಷ್ಟದಲ್ಲಿದೆ. ಸರ್ಕಾರ ಕರೊನಾ ಸಂಕಷ್ಟದ ಸಮಯದಲ್ಲಿ ಶ್ರೀಮಂತ ಕಂಪನಿಗಳ ಸಾಲ ಮತ್ತು ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿದೆ. ಆದರೆ, ರೈತ ಉತ್ಪಾದಕ ಕಂಪನಿಗಳ ಮೇಲಿನ ಸಾಲ ಮನ್ನಾ ಮಾಡಲು ಮನಸ್ಸು ಮಾಡಲಿಲ್ಲ. ಹೀಗಾಗಿ ರೈತರ ಸಂಸ್ಥೆಗಳು ಸಂಕಷ್ಟಕ್ಕೀಡಾಗಿವೆ ಎಂದರು.
ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯಸ್ಥ ನಾಗೇಶ್, ನಬಾರ್ಡ್ ಜಿಲ್ಲಾ ಮುಖ್ಯಸ್ಥ ಶಾಂತವೀರ್, ಕಾವೇರಿ ಗ್ರಾಮೀಣ ಬ್ಯಾಂಕಿನ ಶಂಕರ್‌ನಾರಾಯಣ್, ನಯನ ಕುಮಾರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಾಲೀಕ ಕುಮಾರ್, ಚೇತನ್ ಗಾರ್ಡನ್ ಮಾಲೀಕ ಚೇತನ್, ರೈತ ಮುಖಂಡರಾದ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜು, ಪಿ.ಸೋಮಶೇಖರ್, ಕಿರಗಸೂರು ಶಂಕರ್, ನಾಗರಾಜಮೂರ್ತಿ, ಕುರುಬೂರು ಸಿದ್ದೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net