

ಹುಬ್ಬಳ್ಳಿ: ರೈತರು ತಾಯಿಯಷ್ಟೇ ಶ್ರೇಷ್ಠ. ಕಾರಣ ತಾಯಿ ಜನ್ಮ ನೀಡಿ ಹಾಲುಣಿಸಿದರೆ ರೈತರು ಸಾಯುವವರೆಗೂ ಅನ್ನ ನೀಡಿ ಕಾಪಾಡುತ್ತಾರೆ. ಆದ್ದರಿಂದ ಪ್ರತಿಯೊಬ್ಬರೂ ರೈತರಿಗೆ ಋಣಿಯಾಗಿರಬೇಕು ಎಂದು ಎಸ್.ಎಸ್. ಶೆಟ್ಟರ್ ಫೌಂಡೇಷನ್ ಅಧ್ಯಕ್ಷ ಸಂಕಲ್ಪ ಶೆಟ್ಟರ್ ಹೇಳಿದರು.
ಇಲ್ಲಿಯ ಬಾದಾಮಿ ನಗರದಲ್ಲಿ ಎಸ್. ಎಸ್. ಶೆಟ್ಟರ್ ಫೌಂಡೇಷನ್ ವತಿಯಿಂದ ಸೋಮವಾರ ಅರ್ಹ ರೈತರಿಗೆ ಕೀಟನಾಶಕ ಸಿಂಪಡಣೆ ಯಂತ್ರ (ಸ್ಪ್ರೇಯರ್) ವಿತರಿಸಿ ಅವರು ಮಾತನಾಡಿದರು.
ಫೌಂಡೇಷನ್ ವತಿಯಿಂದ ರೈತರಿಗೆ ಸಹಾಯಕವಾಗುವ ಅನೇಕ ಕಾರ್ಯಕ್ರಮಗಳನ್ನು ಈಗಾಗಲೇ ನಿರ್ವಹಿಸಿದ್ದೇವೆ. ಮುಂದೆಯೂ ರೈತರ ಸೇವಾ ಕಾರ್ಯ ಮಾಡಲಿದ್ದೇವೆ ಎಂದರು.
ಫೌಂಡೇಷನ್ ಅಧ್ಯಕ್ಷ ಸಂಕಲ್ಪ ಶೆಟ್ಟರ್, ವಾಕರಸಾ ಸಂಸ್ಥೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ ಅವರ ನೇತೃತ್ವದಲ್ಲಿ ಕೀಟನಾಶಕ ಸಿಂಪಡಣೆ ಯಂತ್ರವನ್ನು ಗೋಪನಕೊಪ್ಪ, ಉಣಕಲ್, ಬೈರಿದೇವರಕೊಪ್ಪದ ರೈತರಿಗೆ ವಿತರಿಸಲಾಯಿತು.
ಫೌಂಡೇಷನ್ ಸಂಯೋಜಕ ಪರಮ ಕಿತ್ಲಿ, ಪ್ರಮುಖರಾದ ಶಿವಪ್ಪ ನಾಗೋಜಿ, ಶಿವು ಕೊಪ್ಪದ, ನಿತೀಶ ನಂದಿಹಾಳ, ವಿನೋದ ಬಂಕಾಪುರ, ಹನುಮಂತ ಹರ್ತಿ, ಬಸವರಾಜ ಹಳಿಯಾಳ, ಅಜಯ ಕಡ್ಡಿ, ಮಂಜುನಾಥ ನಾಗರಾಳ ಇತರರಿದ್ದರು.