

ಮಾಯಕೊಂಡ: ದಾವಣಗೆರೆ ತಾಲೂಕಿನ ಮಾರುಕಟ್ಟೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಹೆಚ್ಚುವರಿ ಬೆಲೆಗೆ ಮಾರಾಟವಾಗುತ್ತಿದೆ ಎಂದು ಆರೋಪಿಸಿರುವ ರೈತರು, ಈ ಬಗ್ಗೆ ಕೃಷಿ ಇಲಾಖೆ ಸೂಕ್ತ ಪರಿಶೀಲನೆ ನಡೆಸಿ ರೈತರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.
ರೈತ ಸಂಘ ಹಾಗೂ ಹಸಿರು ಸೇನೆ (ಪುಟ್ಟಣ್ಣಯ್ಯ ಬಣ) ಮುಖಂಡರು ಮತ್ತು ಕಾರ್ಯಕರ್ತರು ಶುಕ್ರವಾರ ಮಾಯಕೊಂಡ ಆರ್ಎಸ್ಕೆ ಕೃಷಿ ಅಧಿಕಾರಿಗಳ ಮೂಲಕ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೌಡ್ರು ಅಶೋಕ್, ಮಾಯಕೊಂಡ, ಆನಗೋಡು ಹಾಗೂ ಅಣಜಿ ಹೋಬಳಿಯ ಕೆಲವು ಖಾಸಗಿ ಆಗ್ರೋ ಫರ್ಟಿಲೈಜರ್ಗಳಲ್ಲಿ ಗೊಬ್ಬರಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದರು. ಜತೆಗೆ, ಕೆಲ ಅಂಗಡಿಗಳಲ್ಲಿ ಕಳಪೆ ಬಿತ್ತನೆ ಬೀಜ ಮತ್ತು ಗೊಬ್ಬರ ಸಹ ಮಾರಾಟ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘ ಹಾಗೂ ಹಸಿರು ಸೇನೆಯ ಸಂಘಟನಾ ಕಾರ್ಯದರ್ಶಿ ಅಣಬೇರು ಕುಮಾರಸ್ವಾಮಿ ಮಾತನಾಡಿ, ಹೆಚ್ಚಿನ ದರಕ್ಕೆ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳನ್ನು ಮಾರಾಟ ಮಾಡುತ್ತಿದ್ದರೂ ಕೃಷಿ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಕೂಡಲೇ ಇಂತಹ ಅಂಗಡಿಗಳ ಮಾಲೀಕರಿಗೆ ನೋಟಿಸ್ ನೀಡಿ, ಅವರ ಲೈಸೆನ್ಸ್ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಮೆಕ್ಕೆಜೋಳ ಬಿತ್ತನೆ ಮಾಡಿ 35 ರಿಂದ 40 ದಿನಗಳಾಗಿವೆ. ಬೆಳೆಗಳಿಗೆ ಯೂರಿಯಾ ಗೊಬ್ಬರ ಹಾಕುವ ಸಮಯ ಬಂದಿದ್ದು, ಜಿಲ್ಲೆಯಲ್ಲಿನ ಎಲ್ಲ ತಾಲೂಕುಗಳಂತೆ ದಾವಣಗೆರೆ ತಾಲೂಕಿನಲ್ಲೂ ಒಂದೇ ದರವನ್ನು ನಿಗದಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು.
ನಿಗದಿತ ದರದಲ್ಲೇ ಮಾರಾಟ: ಮನವಿ ಸ್ವೀಕರಿಸಿ ಮಾತನಾಡಿದ ಕೃಷಿ ಅಧಿಕಾರಿ ಬೀರಪ್ಪ, ಮಾಯಕೊಂಡ ಹೋಬಳಿಯಲ್ಲಿ ರಸಗೊಬ್ಬರ ಹಾಗೂ ಬಿತ್ತನೆ ಬೀಜ ಮಾರಾಟ ಮಾಡುವ 54 ಆಗ್ರೋ ಫರ್ಟಿಲೈಜರ್ಸ್ ಅಂಗಡಿಗಳಿದ್ದು, ಎಲ್ಲ ಅಂಗಡಿಗಳಿಗೂ ಭೇಟಿ ನೀಡಿ ಪರಿಶೀಲಿಸಲಾಗಿದೆ ಎಂದು ತಿಳಿಸಿದರು.
ಎಲ್ಲೂ ಕಳಪೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಮಾರಾಟ ಕಂಡುಬಂದಿಲ್ಲ. ನಿಗದಿತ ದರಗಳಿಗೇ ಮಾರಾಟ ಮಾಡುತ್ತಿದ್ದಾರೆ. ಹೆಚ್ಚುವರಿ ಬೆಲೆಗೆ ಮಾರಿದ್ದು ಕಂಡುಬಂದಲ್ಲಿ ಕೂಡಲೇ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ರೈತ ಮುಖಂಡರಾದ ರಾಮಜೋಗಿ ಪ್ರತಾಪ್, ಬಾಡ ಹನುಮಂತಪ್ಪ, ಚಂದ್ರಶೇಖರ್, ಎಸ್. ಲೋಕೇಶ್, ಜಿ.ಎನ್. ಕೋಟೆ, ಭರತ್, ಭೀಮಪ್ಪ, ಶೇಷಗಿರಿ ಪುಟ್ಟಪ್ಪ, ಎಂ.ಜಿ. ಗುರುನಾಥ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.