

ಶೃಂಗೇರಿ: ಕರಾಳ ಕಾನೂನುಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದು ಬಹುರಾಷ್ಟ್ರೀಯ ಕಂಪನಿಗಳಿಗೆ ರೈತರನ್ನು ಒಪ್ಪಿಸುವ ಹುನ್ನಾರವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಪರಿಸರವಾದಿ ಕಲ್ಕುಳಿ ವಿಠ್ಠಲ ಹೆಗ್ಡೆ ಆರೋಪಿಸಿದರು.
ಮಾ.20ರಂದು ಶಿವಮೊಗ್ಗದಲ್ಲಿ ನಡೆಯುವ ರೈತ ಮಹಾಪಂಚಾಯತ್ ಕಾರ್ಯಕ್ರಮದ ಕರಪತ್ರವನ್ನು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.
ಕೃಷಿ ಕಾಯ್ದೆಗಳು ರೈತಪರವಾಗಿ ಇವೆಯೇ? ಎಂಬ ಕುರಿತು ಸಮರ್ಥವಾಗಿ ವಿವರಣೆ ನೀಡಲು ಆಡಳಿತ ನಡೆಸುವರು ಸೋತಿದ್ದಾರೆ. 10 ವರ್ಷಗಳ ಕೆಳಗೆ ಕಾಫಿಗೆ 6,500 ರೂ. ಇತ್ತು. ಪ್ರಸ್ತುತ ಬೆಳೆಗಾರರ ಭವಿಷ್ಯವನ್ನು ಲಂಡನ್ನಲ್ಲಿರುವ ಕಂಪನಿಗಳು ನಿರ್ಧರಿಸುತ್ತವೆ. ಸರ್ಕಾರದ ನಿಯಂತ್ರಣವಿಲ್ಲದೆ ಬಹುರಾಷ್ಟ್ರೀಯ ಕಂಪನಿಗಳು ಹೇಳಿದ ಬೆಲೆಗೆ ಬೆಳೆಗಳು ಮಾರಾಟವಾಗುತ್ತಿವೆ. ಕಾಪೋರೇಟ್ ಬಂಡವಾಳಗಾರರಿಗೆ ರತ್ನಗಂಬಳಿ ಹಾಸಿ ಕೃಷಿಕರನ್ನು ಬೀದಿಗೆ ತಳ್ಳುವ ಕೆಲಸದ ವಿರುದ್ಧ ನಾವು ಹೋರಾಡಬೇಕಿದೆ ಎಂದರು.
ಅಕ್ಕಿ, ಬೇಳೆ, ಗೋಧಿಯನ್ನು ಅಗತ್ಯ ವಸ್ತುಗಳ ಪಟ್ಟಿಯಿಂದ ಹೊರಗಿಟ್ಟು ಕಾಳಸಂತೆಕೋರರಿಗೆ ರಹದಾರಿ ಮಾಡಿಕೊಟ್ಟಿದೆ. ಇನ್ನೂ ಭೂ ಸುಧಾರಣೆ ಕಾಯ್ದೆ ಜಾರಿಗೆ ತಂದು ಯಾರು ಬೇಕಾದರೂ ನೂರಾರು ಎಕರೆ ಭೂಮಿಯನ್ನು ಖರೀದಿಸುವಂತೆ ಮಾಡಿ ಕಾಪೋರೇಟ್ ಕೃಷಿಗೆ ಸರ್ಕಾರ ಅನುವು ಮಾಡಿಕೊಟ್ಟಿದೆ ಎಂದು ದೂರಿದರು.
ರೈತ ವಿರೋಧಿ ನೀತಿಗಳಿಂದಾಗಿ ಕೃಷಿ ಮಾಡುವವರ ಸಂಖ್ಯೆ ಇಳಿಕೆಯಾಗುತ್ತಿದೆ. ಪಡಿತರ ಆಹಾರ ವ್ಯವಸ್ಥೆಯೂ ಭವಿಷ್ಯದಲ್ಲಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ನಾವೆಲ್ಲರೂ ಕೈಕಟ್ಟಿ ಕುಳಿತುಕೊಳ್ಳುವ ಸಮಯ ಇದಲ್ಲ. ನಾವು ಹೋರಾಡಬೇಕು ಎಂದರು.
ಜೆಡಿಎಸ್ ಮುಖಂಡ ಭರತ್, ಆದಿವಾಸಿ ಗಿರಿಜನ ಸಮಿತಿ ಕಾರ್ಯದರ್ಶಿ ಮರಿಯಪ್ಪ, ಯೋಗೀಶ್, ವಿದ್ಯಾರಣ್ಯಪುರ ಗ್ರಾಪಂ ಸದಸ್ಯ ಶಬರೀಶ್, ಅಖಿಲ ಭಾರತ ಅಂಬೇಡ್ಕರ್ ಸೈನ್ಯದ ಜಿಲ್ಲಾಧ್ಯಕ್ಷ ಗುರುಪ್ರಸಾದ್, ಮಲೆನಾಡು ಜನಪರ ಒಕ್ಕೂಟದ ಸಂತೋಷ್ ಕಾಳ್ಯ, ಮನೋಜ್ ಇದ್ದರು.