ಅರಣ್ಯ ಇಲಾಖೆ ವಿರುದ್ಧ ರೈತರ ಅಕ್ರೋಶ

21BTP03
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಕರ್ನಾಟಕ ರೈತ ಸಂಘದವತಿಯಿಂದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿದ ಪಿರಿಯಾಪಟ್ಟಣ ರೈತರು.
Published on

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಚನ್ನಕಲ್ ಕಾವಲ್ ವ್ಯಾಪ್ತಿಯ ಸರ್ವೇ ನಂ.30 ಮತ್ತು ಗರೆಗುಡ್ಡ ಕಾವಲ್ ವ್ಯಾಪ್ತಿಯ ಸರ್ವೇ ನಂ.94ರ ಮೇಲೆ ಅರಣ್ಯ ಇಲಾಖೆಯು ತೆಗೆದುಕೊಂಡಿರುವ ಕ್ರಮ ಖಂಡಿಸಿ ಬುಧವಾರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಕರ್ನಾಟಕ ರೈತ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.

ರಾಜ್ಯ ರೈತ ಸಂಘದ ಅಧ್ಯಕ್ಷ ಆನಂದಗೆರೆ ಮಂಜುನಾಥ್ ಗೌಡ ಮಾತನಾಡಿ, ಚನ್ನಕಲ್ ಕಾವಲ್ ವ್ಯಾಪ್ತಿಯ ಸರ್ವೇ ನಂ.30 ಮತ್ತು ಗರೆಗುಡ್ಡ ಕಾವಲ್ ವ್ಯಾಪ್ತಿಯ ಸರ್ವೇ ನಂ.94ರ ಜಮೀನಿನ ಮೇಲೆ ಅರಣ್ಯ ಇಲಾಖೆಯು ಮೀಸಲು ಅರಣ್ಯವನ್ನಾಗಿ ಮಾಡಲು ಹೊರಟಿರುವುದು ಅನ್ಯಾಯವಾಗಿದೆ. ಯಾವುದೇ ಕಾರಣಕ್ಕೂ ಒಂದು ಇಂಚು ಭೂಮಿಯನ್ನು ನಾವು ಬಿಡುವುದಿಲ್ಲ. ಉಳುವನೇ ಭೂಮಿ ಒಡೆಯ ಕಾಯ್ದೆ ಅನ್ವಯ ಪಿರಿಯಾಪಟ್ಟಣ ತಾಲೂಕಿನ ರೈತರಿಗೆ ಹಕ್ಕು ಪತ್ರ ನೀಡಬೇಕು. ಅಕ್ರಮ ಪಂಪ್ ಸೆಟ್ ಸಕ್ರಮ ಮಾಡಿಕೊಳ್ಳಲು 26 ಸಾವಿರ ರೂ.ಗಳನ್ನು ಸರ್ಕಾರಕ್ಕೆ ಕಟ್ಬೇಕು ಅಂತ ಇದೆ. ರೈತರಿಂದ ಈ ಹಣವನ್ನು ಕಟ್ಟಲು ಸಾಧ್ಯವಿಲ್ಲ. ಬಲವಂತವಾಗಿ ಸಂಪರ್ಕ ಕಡಿತಗೊಳಿಸಿದರೆ, ಉಗ್ರ ಹೋರಾಟ ಮಾಡಲಾಗುವುದು ಎಂದರು.

ರೈತರ ಬೃಹತ್ ಪ್ರತಿಭಟನೆ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಮನವಿ ಆಲಿಸಿ, ಸರ್ಕಾರ ಮಟ್ಟದಲ್ಲಿ ಈ ವಿಚಾರವನ್ನು ಗಮನಕ್ಕೆ ತರುವ ಮೂಲಕ ಚರ್ಚಿಸಲಾಗುವುದು. ರೈತರ ಈ ವೇಳೆ ನೀಡಿರುವ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು. ಬಳಿಕ ರೈತರು ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆದರು.

ಕಬ್ಬು ಬೆಳೆಗಾರರ ಸಂಘದ ರಾಜ್ಯ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಸಂಸ್ಥಾಪಕ ಅಧ್ಯಕ್ಷ ಶರಣಪ್ಪ ದೊಡ್ಡಮನೆ ಕೊಪ್ಪಳ, ರೈತ ಮುಖಂಡ ನಾಗರಾಜಗೌಡ, ಜಿಲ್ಲಾಧ್ಯಕ್ಷ ಜೈರಾಮೇಗೌಡ, ತಾಲೂಕು ಅಧ್ಯಕ್ಷರ ಕುಮಾರ್, ಹೋಬಳಿ ಅಧ್ಯಕ್ಷ ಸಣ್ಣೇಗೌಡ, ಶೇಕ್ ಈಬಾದ್ ಉಲ್ಲಾ, ಯೋಗೇಶ್, ಗಣೇಶ್, ಪಾಂಡು ಸೇರಿದಂತೆ ಸಾವಿರಾರು ರೈತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net