

ಗುಂಡ್ಲುಪೇಟೆ: ಕಾಡಂಚಿನ ಜಮೀನುಗಳಲ್ಲಿ ವನ್ಯಜೀವಿಗಳ ದಾಳಿ ತಡೆಗಟ್ಟಲು ಹಾಗೂ ಬೆಳೆನಷ್ಟಕ್ಕೆ ಸೂಕ್ತ ಪರಿಹಾರ ನೀಡಲು ವಿಫಲವಾದ ಅರಣ್ಯ ಇಲಾಖೆ ವಿರುದ್ಧ ಶನಿವಾರ ತಾಲೂಕಿನ ಹೊಸಪುರ ಗ್ರಾಮದಲ್ಲಿ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅಧ್ಯಕ್ಷತೆಯಲ್ಲಿ ಕರೆದಿದ್ದ ಗ್ರಾಮಸ್ಥರು ಹಾಗೂ ಅರಣ್ಯಾಧಿಕಾರಿಗಳ ಸಭೆಯಲ್ಲಿ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಹೊಸಪುರ ಗ್ರಾಮದ ರೈತ ಶಿವರುದ್ರಪ್ಪ ಮಾತನಾಡಿ, ಪ್ರತಿ ದಿನವೂ ಆನೆಗಳು ಕಾಡಿನಿಂದ ಹೊರಬಂದು ಸಾಲಸೋಲ ಮಾಡಿ ಬೆಳೆದ ಬೆಳೆಗಳನ್ನು ತಿಂದುಹಾಕುತ್ತಿವೆ. ಅರಣ್ಯ ಇಲಾಖೆಯಿಂದ ಪುಡಿಗಾಸಿನ ಪರಿಹಾರ ಪಡೆಯಲು ಅದಕ್ಕಿಂತ ಹೆಚ್ಚಿನ ಖರ್ಚು ಮಾಡಬೇಕಾಗಿದೆ. ಇದರಿಂದ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ ಎಂದು ಹತಾಶೆ ವ್ಯಕ್ತಪಡಿಸಿದರು.
ಮುಖಂಡ ಮಂಚಹಳ್ಳಿ ಲೋಕೇಶ್ ಮಾತನಾಡಿ, ಅರಣ್ಯ ಇಲಾಖೆ ಕಾಡಂಚಿನ ಗ್ರಾಮಗಳ ರೈತರನ್ನು ಒಕ್ಕಲೆಬ್ಬಿಸಲು ಹುನ್ನಾರ ನಡೆಸಿದೆ. ಕಾಡಂಚಿನಲ್ಲಿದ್ದ ಸರ್ಕಾರಿ ಜಮೀನುಗಳನ್ನು ಉಳುಮೆ ಮಾಡುತ್ತಿದ್ದ ರೈತರಿಗೆ ಕಂದಾಯ ಇಲಾಖೆ ಮೂರು ದಶಕದ ಹಿಂದೆ ಸಾಗುವಳಿ ಪತ್ರ ನೀಡಿದೆ. ಅಲ್ಲದೆ ಪಿತ್ರಾರ್ಜಿತ ಆಸ್ತಿಯನ್ನೂ ಹೊಂದಿರುವ ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಮಾಡುತ್ತಾ ಕಂದಾಯವನ್ನು ಕಟ್ಟುತ್ತಿದ್ದಾರೆ. ರೈತರು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ ಎಂಬ ನೆಪದಿಂದ ಅರಣ್ಯ ಇಲಾಖೆ ಬೆಳೆನಷ್ಟಕ್ಕೂ ಪರಿಹಾರ ನೀಡುತ್ತಿಲ್ಲ. ಆನೆಗಳು ಜಮೀನಿಗೆ ಬಂದಿರುವ ವಿಷಯ ತಿಳಿಸಿದರೂ ಸಿಬ್ಬಂದಿ ಅವುಗಳನ್ನು ಕಾಡಿಗಟ್ಟುತ್ತಿಲ್ಲ. ಕಂದಕ, ಸೋಲಾರ್ ಬೇಲಿ ನಿರ್ವಹಣೆ ಮಾಡುತ್ತಿಲ್ಲ. ರೈಲ್ವೇ ಕಂಬಿಗಳನ್ನು ಅಳವಡಿಸುತ್ತಿಲ್ಲ. ಇದರಿಂದ ಕಾಡಂಚಿನ ಜನರು ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ. ರಾತ್ರಿ ವೇಳೆ ಕಾಡಿನಿಂದ ಹೊರಬರುವ ಆನೆಗಳನ್ನು ತಡೆಗಟ್ಟಲು ವಾಹನಗಳ ಕೊರತೆಯಿದೆ ಎಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ. ಆದರೆ, ಪ್ರತಿ ವರ್ಷವೂ ಸಫಾರಿಗೆ ಹೊಸ ಹೊಸ ವಾಹನಗಳನ್ನು ಖರೀದಿಸುತ್ತಿದ್ದಾರೆ. ಸರ್ಕಾರ ಎಲ್ಲ ಸವಲತ್ತುಗಳನ್ನು ನೀಡಿದರೂ ಅರಣ್ಯಾಧಿಕಾರಿಗಳು ದಾಳಿ ತಪ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ರೈತರಿಗೆ ಅಧಿಕಾರಿಗಳು ಸಿಕ್ಕುತ್ತಿಲ್ಲ. ಆನೆ ಕಾವಲು ನಡೆಸುವ ಸಿಬ್ಬಂದಿಗೂ ಸಂಬಳ ನೀಡುತ್ತಿಲ್ಲ ಎಂದು ಆರೋಪಗಳ ಸುರಿಮಳೆಗರೆದರು.
ಬಂಡೀಪುರ ಹುಲಿ ಯೋಜನೆಯ ಕ್ಷೇತ್ರ ನಿರ್ದೇಶಕ ಎಸ್.ಪ್ರಭಾಕರನ್ ಮಾತನಾಡಿ, ಅರಣ್ಯ ಇಲಾಖೆ ಕಾಡಂಚಿನಲ್ಲಿ ಮುಚ್ಚಿಕೊಂಡಿರುವ ಕಂದಕಗಳ ಹೂಳೆತ್ತಿಸುವ ಜತೆಗೆ ಸೋಲಾರ್ ಬೇಲಿ ಬಳಕೆಗೆ ತರಲು ಕ್ರಮಕೈಗೊಂಡಿದೆ. ಆನೆಗಳು ಹೆಚ್ಚಾಗಿ ಹೊರಬರುತ್ತಿರುವ ಸ್ಥಳಗಳಲ್ಲಿ ಗಸ್ತು ಹೆಚ್ಚಿಸಲಾಗಿದೆ. ಶ್ರೀಕಂಠಪುರ ಮುಂತಾದ ಕೆಲವು ಗ್ರಾಮಗಳು ಅರಣ್ಯಕ್ಕೆ ಸೇರಿವೆ ಎಂದು ತೋರಿಸುತ್ತಿದೆ. ಇದರಿಂದ ಪರಿಹಾರ ಕೊಡಲು ತೊಂದರೆಯಾಗುತ್ತಿದೆ. ಬೆಳೆನಷ್ಟಕ್ಕೆ ಮಹಜರು ನಡೆಸಲಾಗಿದ್ದು, ಸರ್ಕಾರದಿಂದ ಅನುದಾನ ಬರುತ್ತಿದ್ದಂತೆ ಪರಿಹಾರ ನೀಡಲಾಗುತ್ತಿದೆ. ಇನ್ನುಳಿದ ಅರ್ಜಿಗಳಿಗೆ ಶೀಘ್ರವೇ ಪರಿಹಾರ ಕೊಡಲಾಗುವುದು ಎಂದು ಹೇಳಿದರು.
ಶಾಸಕ ಗಣೇಶ್ ಪ್ರಸಾದ್ ಮಾತನಾಡಿ, 2017-18ರ ವರೆಗೂ ಅರಣ್ಯ ಇಲಾಖೆ ಬೆಳೆನಷ್ಟಕ್ಕೆ ಪರಿಹಾರ ನೀಡುತ್ತಿತ್ತು. ಆದರೆ, ಇದು ಅರಣ್ಯ ಭೂಮಿ ಎಂದು ತೋರಿಸುವುದರಿಂದ ಸರ್ಕಾರದ ಮಟ್ಟದಲ್ಲಿ ಡಿ ನೋಟಿಫಿಕೇಶನ್ ಮಾಡಲು ಕ್ರಮಕೈಗೊಳ್ಳಲಾಗುವುದು. ಆನೆಗಳು ಹೊರಬರುವುದನ್ನು ತಡೆಗಟ್ಟಲು ಮರು ಸಮೀಕ್ಷೆ ನಡೆಸಿ ಸೋಲಾರ್ ಬೇಲಿ ಅಳವಡಿಸಲಾಗುವುದು. ಎರಡರ ಬದಲು ಮೂರು ರೈಲ್ವೇ ಕಂಬಿ ಅಳವಡಿಸಲಾಗುವುದು. ಬೆಳೆನಷ್ಟದ ಬಗ್ಗೆ ಬಂದ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮತ್ತು ಪರಿಹಾರ ಕೊಡಲು ಕ್ರಮಕೈಗೊಳ್ಳಲಾಗುವುದು. ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಕರೆ ಮಾಡಿ ಅರಣ್ಯ ಸಿಬ್ಬಂದಿಗೆ ಸಂಬಳ ನೀಡಲು ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವಂತೆ ಕೋರಿದರು. ಬುಧವಾರ ಸಚಿವರೇ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಕೂಡಲೇ ಕಂದಕಗಳ ಹೂಳೆತ್ತಿಸಿ ತಾತ್ಕಾಲಿಕ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್, ಓಂಕಾರ್ ವಲಯಾರಣ್ಯಾಧಿಕಾರಿ ಹನುಮಂತಪ್ಪ ಪಾಟೀಲ್, ಚಾಮುಲ್ ನಿರ್ದೇಶಕ ನಂಜುಂಡಪ್ರಸಾದ್, ತಾಪಂ ಮಾಜಿ ಸದಸ್ಯ ನೀಲಕಂಠಪ್ಪ ಸೇರಿದಂತೆ ಹಲವರು ಇದ್ದರು.