

ಮುದ್ದೇಬಿಹಾಳ: ರೈತ ಬದುಕಿದರೆ ಜಗತ್ತು ಬದುಕುತ್ತದೆ. ರೈತ ಬಿಕ್ಕಿದರೆ ಜಗತ್ತ್ತು ಬಿಕ್ಕುತ್ತದೆ. ಹಲವಾರು ಸವಾಲು ಎದುರಿಸಿಯೂ ಮಾನವ ಕುಲಕ್ಕೆ ಅನ್ನ ಹಾಕುವ ರೈತನ ಕಣ್ಣಲ್ಲಿ ನೀರು ತರಿಸಿದರೆ ಅದು ಶಾಪವಾಗಿ ಪರಿಣಮಿಸುತ್ತದೆ ಎಂದು ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಬೆನಕನಹಳ್ಳಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ, ಸಾಹಿತಿ ಸಾಹೇಬಗೌಡ ಬಿರಾದಾರ ಹೇಳಿದರು.
ಪಟ್ಟಣ ಹೊರವಲಯದ ಕುಂಟೋಜಿ ಗ್ರಾಮದ ಶ್ರೀ ಘನಮಠೇಶ್ವರ ಪಬ್ಲಿಕ್ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ರೈತ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದ ಅವರು, ಸರ್ಕಾರಗಳು ಉತ್ತಮ ನೀತಿ, ನಿಯಮ ರೂಪಿಸಿದರೆ ಮಾತ್ರ ರೈತನ ಬದುಕು ಸುಭದ್ರವಾಗುತ್ತದೆ ಎಂದರು.
ರೈತ ಬೆಳೆದ ಬೆಳಗೆ ಉತ್ತಮ ಬೆಲೆ ಸಿಗುವಂತಾಗಬೇಕು. ಜಗತ್ತು ಎಷ್ಟೇ ಮುಂದುವರಿದರೂ ಒಂದು ಅಗುಳು ಅನ್ನ ಸಿಗಬೇಕಾದರೆ ರೈತನನ್ನೇ ಆಶ್ರಯಿಸಬೇಕು. ಗೂಗಲ್‌ನಲ್ಲಿ ಚಿತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದೇ ಹೊರತು ಚಿತ್ರಾನ್ನವನ್ನಲ್ಲ. ರೈತ ತನ್ನೊಂದಿಗೆ ಪರಿಸರದ ಭಾಗವಾಗಿರುವ ಪಶು, ಪಕ್ಷಿ, ಪ್ರಾಣಿಗಳನ್ನು ಸಲಹುತ್ತಾನೆ. ಹಸಿದವರಿಗೆ ಹೊಟ್ಟೆ ತುಂಬ ಅನ್ನ ನೀಡಿ ಸಂತೃಪ್ತಿ ಪಡುತ್ತಾನೆ. ಇಂಥ ರೈತರ ಬದುಕಿನ ಬಗ್ಗೆ ಚಿಂತಿಸುವ ಕೀರ್ತಿ ಘನಮಠ ಶಿವಯೋಗಿಗಳಿಗೆ ಸಲ್ಲುತ್ತದೆ ಎಂದರು.
ಸಂಸ್ಥೆ ಅಧ್ಯಕ್ಷ ಎಸ್.ಎಂ.ಸಜ್ಜನ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತರ ಬದುಕು, ಅವರು ಪಡುತ್ತಿರುವ ಬವಣೆಯನ್ನು ಮಕ್ಕಳಿಗೆ ತಿಳಿಸಿಕೊಡುವ ದೃಷ್ಟಿಯಿಂದ ಶಾಲೆಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸ್ತುತ್ಯಾರ್ಹಎಂದರು.
ಸಂಸ್ಥೆ ನಿರ್ದೇಶಕಿ ಪದ್ಮಾವತಿ ಸಜ್ಜನ, ಶಿಕ್ಷಕರಾದ ಅನುಪಮಾ ಕಟ್ಟಿ, ರವಿ ಬಿರಾದಾರ ಇದ್ದರು.
ಜಾನಪದ ಗೀತೆ, ಅದಕ್ಕೆ ತಕ್ಕಂತೆ ನೃತ್ಯ ರೂಪಕಗಳನ್ನು ಪ್ರಾಥಮಿಕ, ಪ್ರೌಢಶಾಲೆಯ ಮಕ್ಕಳು ನಡೆಸಿಕೊಟ್ಟರು. ಚಿತ್ರಲೇಖ ಕರಡ್ಡಿ ಸ್ವಾಗತಿಸಿದರು. ಶಿವಪೂಜಾ ವಂದಿಸಿದರು. ನವ್ರೀನ್ ದಖನಿ ನಿರೂಪಿಸಿದರು.