

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರೈತರ ಹಾಗೂ ಮಹಿಳೆಯರ ಬೆನ್ನೆಲುಬಾಗಿದೆ. ನಶಿಸಿ ಹೋಗುವ ಹಂತದಲ್ಲಿದ್ದ ಭತ್ತದ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಅದನ್ನು ವಿಸ್ತರಿಸಲು ಪಣತೊಟ್ಟು ಕೆಲಸ ಮಾಡುತ್ತಿದೆ ಎಂದು ನಬಾರ್ಡ್ ಬೆಂಗಳೂರು ಪ್ರಾದೇಶಿಕ ಕಚೇರಿ ಮುಖ್ಯ ಮಹಾಪ್ರಬಂಧಕ ಟಿ.ರಮೇಶ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 2023-24ನೇ ಸಾಲಿನಲ್ಲಿ ರಾಜ್ಯದ 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅನುಷ್ಠಾನಗೊಳಿಸಲಿರುವ ಯಾಂತ್ರಿಕೃತ ಭತ್ತ ಬೇಸಾಯದ ‘ಯಂತ್ರಶ್ರೀ’ ಕಾರ್ಯಕ್ರಮಕ್ಕೆ ಬೆಳ್ತಂಗಡಿ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್ ಮಾತನಾಡಿ, ಹಡಿಲು ಭೂಮಿ ಸಮಸ್ಯೆ ಹೆಚ್ಚಿದ್ದು, ಹೊಸ ಪದ್ಧತಿ ಅಳವಡಿಸಿ ಹಡಿಲು ಭೂಮಿ ಹಸನು ಮಾಡಲಾಗಿದೆ. ಈ ಯೋಜನೆಯಲ್ಲಿ ರೈತರಿಗೆ ಭತ್ತ ಬೆಳೆಯಲು ಯಂತ್ರ ಹಾಗೂ ಹಣಕಾಸು ಸಹಕಾರ ನೀಡಲಾಗುತ್ತದೆ. 40 ವರ್ಷಗಳಲ್ಲಿ ಯೋಜನೆ ರೈತರ ಅನುಕೂಲಕ್ಕಾಗಿ ಸ್ವಸಹಾಯ ಸಂಘ, ಬ್ಯಾಂಕ್, ಸರ್ಕಾರ ಹಾಗೂ ನಬಾರ್ಡ್ ಮೂಲಕ ಸಾಕಷ್ಟು ನೆರವು ನೀಡಿ ಪ್ರೋತ್ಸಾಹಿಸುತ್ತಿದೆ. 8 ಲಕ್ಷಕ್ಕಿಂತ ಅಧಿಕ ರೈತರು 40 ಲಕ್ಷಕ್ಕಿಂತ ಅಧಿಕ ಮಹಿಳೆಯರು, 2.5 ಲಕ್ಷ ಪ್ರಗತಿಬಂಧು ರೈತ ಸಂಘಗಳಿದ್ದು, ಇಲಾಖೆ, ವಿಶ್ವವಿದ್ಯಾಲಯಗಳ ಮೂಲಕ ಕೃಷಿ ತರಬೇತಿ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಲಕ್ಷಾಂತರ ರೈತರ ನೋಂದಣಿ ಮಾಡಿ ಅವರನ್ನು ಸರ್ಕಾರದ ಯೋಜನೆಯ ಫಲಾನುಭವಿಗಳನ್ನಾಗಿ ಮಾಡಲು ಸಹಕರಿಸಲಾಗಿದೆ ಎಂದರು.
ಶ್ರೀ ಕ್ಷೇತ್ರ ಧ.ಮಂ.ಗ್ರಾ. ಯೋಜನೆ ಟ್ರಸ್ಟಿ ಸಂಪತ್ ಸಾಮ್ರಾಜ್ಯ ಯಾಂತ್ರೀಕೃತ ಭತ್ತ ಬೇಸಾಯದ ಮಾಹಿತಿ ಪತ್ರ ಬಿಡುಗಡೆಗೊಳಿಸಿದರು. ಕೃಷಿ ಇಲಾಖೆ ದ.ಕ. ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ.ಎಚ್.ಕೆಂಪೇಗೌಡ, ಸಿರಿ ಸಂಸ್ಥೆ ನಿರ್ದೇಶಕ ಜನಾರ್ದನ್, ಶ್ರೀ ಕ್ಷೇ.ಧ.ಗ್ರಾ.ಯೋಜನೆ ಸಿಇಒ ಅನಿಲ್ ಕುಮಾರ್ ಎಸ್.ಎಸ್., ನಬಾರ್ಡ್ ಜಿಲ್ಲಾ ಕಚೇರಿ ಅಭಿವೃದ್ಧಿ ಪ್ರಬಂಧಕಿ ಸಂಗೀತಾ ಎಸ್.ಕರ್ತ, ಬಂದಾರಿನ ಪ್ರಗತಿಪರ ಕೃಷಿಕ ಜಯಪ್ರಕಾಶ್, ಒಕ್ಕೂಟದ ಅಧ್ಯಕ್ಷ ಸೀತಾರಾಮ್ ಉಪಸ್ಥಿತರಿದ್ದರು.
ಉಡುಪಿ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ ಸ್ವಾಗತಿಸಿದರು. ಬೆಳ್ತಂಗಡಿ ತಾಲೂಕು ಯೋಜನಾಧಿಕಾರಿ ಸುರೇಂದ್ರ ವಂದಿಸಿದರು. ಯೋಜನಾಧಿಕಾರಿ ರಾಮ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸಿಎಚ್‌ಎಸ್‌ಸಿ ಪ್ರಾದೇಶಿಕ ನಿರ್ದೇಶಕ ಅಬ್ರಹಾಂ ಎಂ.ಕೆ., ಪ್ರಾದೇಶಿಕ ನಿರ್ದೇಶಕ ಮನೋಜ್ ಮಿನೇಜಸ್ ಸಹಕರಿಸಿದರು.
ಯಂತ್ರಶ್ರೀ ಸಾಧಕರಾದ ಬೋಗೇಶ್, ಅಶೋಕ್ ಕುಮಾರ್, ಫ್ರಾನ್ಸಿಸ್ ಮಿರಾಂದ, ಅಶೋಕ್, ಶೇಖರ, ಅರುಣ್ ಎಂ.ಕೆ., ಜಯಂತ್ ಬಿ., ಪೂರ್ಣಿಮಾ ಅವರನ್ನು ಗೌರವಿಸಲಾಯಿತು. ಕಲ್ಮಂಜ ಗ್ರಾಮದ ವಸಂತ ಮಡಿವಾಳ ಅವರಿಗೆ ಸಾಂಕೇತಿಕವಾಗಿ ನರ್ಸರಿ ಟ್ರೇ ವಿತರಿಸಲಾಯಿತು. ಕೇಂದ್ರೀಕೃತ ನರ್ಸರಿ ಮಾಡಿದ ರೈತ ಶ್ರೀನಿವಾಸ ಉಡುಪ ಅವರನ್ನು ಸನ್ಮಾನಿಸಲಾಯಿತು. ಯಾಂತ್ರೀಕೃತ ಭತ್ತ ಬೇಸಾಯ ‘ಯಂತ್ರಶ್ರೀ’ ಕಾರ್ಯಕ್ರಮ ಅನುಷ್ಠಾನದ ವಿಡಿಯೋ ಪ್ರದರ್ಶಿಸಲಾಯಿತು. ಕೃಷಿ ಯಂತ್ರೋಪಕರಣಗಳ ಮಳಿಗೆಗಳಿದ್ದವು.
ಡಾ.ಡಿ.ವೀರೇಂದ್ರ ಹೆಗ್ಗಡೆಯವರ ದೂರದರ್ಶಿತ್ವ ಕಾರ್ಯಕ್ರಮವಾದ ಗ್ರಾಮಾಭಿವೃದ್ಧಿ ಯೋಜನೆ ನಾಲ್ಕು ದಶಕಗಳಿಂದ ರಾಜ್ಯದ ಸಣ್ಣ ಮತ್ತು ಅತಿ ಸಣ್ಣ ರೈತರ ಸರ್ವತೋಮುಖ ಅಭಿವೃದ್ಧಿ ಮತ್ತು ನಾಳೆಯ ನೆಮ್ಮದಿಗಾಗಿ ಶ್ರಮ ವಹಿಸುತ್ತಿದೆ. 2010-14ರ ಅವಧಿಯಲ್ಲಿ ಶ್ರೀ ಪದ್ಧತಿ, 2014-20 ಅವಧಿಯಲ್ಲಿ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಕೃಷಿ ಯಂತ್ರಧಾರೆ ಕಾರ್ಯಕ್ರಮ ಜೋಡಿಸಿ ಭತ್ತ ಬೇಸಾಯ ಆಕರ್ಷಕವಾಗಿ ಮಾಡಲು ಯಾಂತ್ರೀಕರಣ ಯೋಜನೆ ‘ಯಂತ್ರಶ್ರೀ’ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ರೈತರಿಗೆ ಅವರ ಹೊಲದ ಬಾಗಿಲಿಗೆ ರಿಯಾಯಿತಿ ಬಾಡಿಗೆ ದರದಲ್ಲಿ ಯಂತ್ರೋಪಕರಣ ಒದಗಿಸುವುದು ಇದರ ಪ್ರಮುಖ ಉದ್ದೇಶ.