ರಾಮನಗರ: ತಮ್ಮ ಜಮೀನಿನಲ್ಲಿಯೇ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರೈತರೊಬ್ಬರು ಮೃತಪಟ್ಟಿರುವ ಟನೆ ಹಾರೋಹಳ್ಳಿ ತಾಲೂಕಿನ ಮರಳವಾಡಿ ಹೋಬಳಿ ತೇರುಬೀದಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಾಗೇಶ್ (45) ಮೃತಪಟ್ಟ ರೈತ. ಸೋಮವಾರ ಬೆಳಿಗ್ಗೆ ತೇರುಬೀದಿ ಸಮೀಪದ ಜಮೀನಿಗೆ ನಾಗೇಶ್ ತೆರಳಿದ್ದು, ಈ ವೇಳೆ ತುಂಡಾಗಿ ಬಿದ್ದಿರುವ ವಿದ್ಯುತ್ ತಂತಿಯನ್ನು ಅವರು ಗಮನಿಸಿರಲಿಲ್ಲ. ಆದರೆ ಮುಂದೆ ಹೋಗುತ್ತಿದ್ದ ಹಸು ತುಂಡಾದ ತಂತಿಯನ್ನು ತುಳಿದು ವಿದ್ಯುತ್ ಪ್ರವಹಿಸಿ ಮೃತಪಟ್ಟಿದೆ. ಈ ವೇಳೆ ಹಸುವನ್ನು ರಕ್ಷಣೆ ಮಾಡಲು ಹೋದ ನಾಗೇಶ್ ಕೂಡ ವಿದ್ಯುತ್ ತಗುಲಿ ಸ್ಥದಲ್ಲಿಯೇ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಕನಕಪುರ ಬೆಸ್ಕಾಂ ಸಹಾಯಕ ಅಭಿಯಂತರ ಕೃಷ್ಣಮೂರ್ತಿ ಹಾಗೂ ಮರಳವಾಡಿ ಬೆಸ್ಕಾಂ ಅಧಿಕಾರಿ ಯಶೋಧ ಹಾಗೂ ಹಾರೋಹಳ್ಳಿ ಸರ್ಕಲ್ ಇನ್ಸ್ಪೆಕ್ಟರ್ ಅರ್ಜುನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾರೋಹಳ್ಳಿ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಮೃತನ ಶವವನ್ನು ಮರಣೋತ್ತರ ಪರೀಕ್ಷಗೆ ದಯಾನಂದ ಆಸ್ಪತ್ರೆಗೆ ಸಾಗಿಸಿದ್ದಾರೆ.
ಬೆಸ್ಕಾಂ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ: ಘಟನೆಗೆ ಬೆಸ್ಕಾಂ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ರೈತರ ಜಮೀನಿನಲ್ಲಿ ಮಳೆಯಿಂದಾಗಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದರೂ ಅದನ್ನು ಮರು ಜೋಡಣೆ ಮಾಡದೇ ಇರುವುದು ಈ ಸಾವಿಗೆ ಕಾರಣ. ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವುದಲ್ಲದೇ, ಮನೆಯ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ನೀಡುವಂತೆ ಆಗ್ರಹಿಸಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಸಂಸದ ಬೇಟಿ
ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸಂಸದ ಡಾ.ಸಿ.ಎನ್.ಮಂಜುನಾಥ್ ಗ್ರಾಮಕ್ಕೆ ತೆರಳಿ ಮೃತ ರೈತ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.