

ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಆ.31ರಂದು ಪ್ರತಿಭಟನೆಗೆ ಕರೆ ನೀಡಿದೆ.
ನಗರದ ಗಾಂಧಿಭವನದಲ್ಲಿ ಬುಧವಾರ ಆಯೋಜಿಸಿದ್ದ ಸಮಿತಿ ಪದಾಧಿಕಾರಿಗಳ ಸಭೆಯ ನಂತರ ಪ್ರತಿಭಟನೆಗೆ ಕರೆ ನೀಡಿದ್ದು, ಎಲ್ಲ ಸಂಘ ಸಂಸ್ಥೆಗಳೂ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿರ್ದೇಶನದಂತೆ 5 ಸಾವಿರ ಕ್ಯೂಸೆಕ್ ನೀರನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡದಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದರೂ, ಸರ್ಕಾರ ನೀರು ಹರಿಸುತ್ತಿರುವುದು ಖಂಡನೀಯ. ಈ ಹಿನ್ನೆಲೆಯಲ್ಲಿ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ತಿಳಿಸಿದೆ.
ಸಭೆಯಲ್ಲಿ ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಮಲ್ಲನಾಯಕನಕಟ್ಟೆ ಬೋರೇಗೌಡ, ಸುನಂದ ಜಯರಾಂ, ಕೆರಗೋಡು ಗುರುಪ್ರಸಾದ್, ಬೇಕ್ರಿ ರಮೇಶ್, ಪ್ರಶಾಂತ್‌ಬಾಬು ಇತರರಿದ್ದರು.