

ಶಿರಸಿ: ಮುಂಗಾರು ಮಳೆ ಸುರಿಯಲಿದೆ ಎಂಬ ನಿರೀಕ್ಷೆಯಲ್ಲಿ ರೈತರು ಕೃಷಿ ಚಟುವಟಿಕೆಗಳತ್ತ ಮುಖ ಮಾಡಿದ್ದು, ಬಿತ್ತನೆ ಬೀಜ, ರಸಗೊಬ್ಬರ ಖರೀದಿಗೆ ಮುಂದಾಗಿದ್ದಾರೆ. ಸಂಪ್ರದಾಯದಂತೆ ಜೂನ್ ಮೊದಲ ವಾರ ವಾರದಲ್ಲಿ ಮುಂಗಾರು ಜಿಲ್ಲೆಗೆ ಆಗಮಿಸಬೇಕಿತ್ತು. ಆದರೆ, ಈ ವರ್ಷ ಸೈಕ್ಲೋನ್ ಮಳೆ ಮಾತ್ರ ಆಗಾಗ ಬಂದು ಹೋಗುತ್ತಿದೆ.
ತಾಲೂಕಿನಲ್ಲಿ 7,350 ಹೆಕ್ಟೇರ್ ಭತ್ತ, 383 ಹೆಕ್ಟೇರ್ ಮುಸುಕಿನ ಜೋಳ, 7,891ಹೆಕ್ಟೇರ್‌ನಲ್ಲಿ ಕಬ್ಬು ಬೆಳೆಯಲಾಗುತ್ತದೆ. ಪೂರ್ವ ಭಾಗವಾದ ಬನವಾಸಿ, ದಾಸನಕೊಪ್ಪ ಭಾಗಗಳಲ್ಲಿ ಈಗಾಗಲೇ ಕೂರಿಗೆ ಬಿತ್ತನೆ ಪ್ರಾರಂಭಗೊಂಡಿದೆ. ಪೂರ್ವ ಪ್ರದೇಶದಲ್ಲಿ ಆಗಾಗ ಮಳೆಯಾಗಿದ್ದರಿಂದ ಭೂಮಿ ಹದಗೊಳಿಸಿ, ಬಿತ್ತನೆ ಕಾರ್ಯ ಕೈಗೊಂಡಿದ್ದಾರೆ.
ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ 59.95 ಕ್ವಿಂಟಾಲ್ ಪಿಎಸಿ-877, 26 ಕ್ವಿಂ, ಅಭಿಲಾಶ, 12 ಕ್ವಿಂ. ಜಯಾ, 3.75 ಕ್ವಿಂ. ಇಂಟಾನ್, 39 ಕ್ವಿಂ. ಎಂಟಿಯು, 1010, 17 ಕ್ವಿಂ. ಐಆರ್-64, 327.30 ಕ್ವಿಂ. ಎಂಟಿವಿ 1001, 32 ಕ್ವಿಂ. ಆರ್‌ಎನ್‌ಆರ್ ಭತ್ತದ ತಳಿಗಳು ದಾಸ್ತಾನಿವೆ. ಮೇ ಅಂತ್ಯದ ವೇಳೆಗೆ 424.54 ಮೆಟ್ರಿಕ್ ಟನ್ ಯೂರಿಯಾ, 594 ಮೆಟ್ರಿಕ್ ಟನ್ ಡಿಎಪಿ, 31 ಮೆಟ್ರಿಕ್ ಟನ್ ಎಂಒಪಿ, 724 ಮೆಟ್ರಿಕ್ ಟನ್ ಕಾಂಪ್ಲೆಕ್ಸ್ ಸೇರಿ ಒಟ್ಟು 1,773.54 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇರಲಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೂಲಿಯಾಳು ಸಮಸ್ಯೆಯಿಂದಾಗಿ ರೈತರು ಟಿಲ್ಲರ್, ಟ್ರಾೃಕ್ಟರ್‌ಗಳ ಮೂಲಕ ಭೂಮಿಯನ್ನು ಹದಗೊಳಿಸಿ, ಕೃಷಿ ಚಟುವಟಿಕೆಯಲ್ಲಿ ತೊಡಗುತ್ತಿದ್ದಾರೆ ಎನ್ನುತ್ತಾರೆ ಪ್ರಗತಿಪರ ಕೃಷಿಕ ನಾರಾಯಣ ಹೆಗಡೆ. ತಾಲೂಕಿನಲ್ಲಿ ಜೂ. 8ರವರೆಗೆ 107.9 ಮಿ.ಮೀ. ವಾಡಿಕೆ ಮಳೆ ಆಗಬೇಕಿತ್ತು. ಆದರೆ, ಈವರೆಗೆ 61.6 ಮಿ.ಮೀ. ಮಳೆಯಾಗಿದೆ. ಶೇ. 46ರಷ್ಟು ಮಳೆ ಕೊರತೆಯಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಂದೀಶ ಆರ್ ತಿಳಿಸಿದರು.
ಭತ್ತದ ಕೃಷಿ ಲಾಭದಾಯಕವಲ್ಲ ಎಂದು ತೋಟದ ಕೃಷಿಯತ್ತ ಅನ್ನದಾತರು ಮುಖ ಮಾಡುತ್ತಿದ್ದಾರೆ. ಭತ್ತ ಬೆಳೆಯಲು ಕೂಲಿಯಾಳುಗಳು ಹೆಚ್ಚು ಬೇಕು. ಅಲ್ಲದೆ, ಸಮಯಕ್ಕೆ ಸರಿಯಾಗಿ ನಾಟಿ ಮಾಡಿದರೆ ಮಾತ್ರ ಭತ್ತ ಕೈ ಸೇರುತ್ತದೆ. ಈಗ ಹೊಸ ತಳಿಗಳ ಬೀಜಗಳನ್ನು ನಾಟಿ ಮಾಡುತ್ತಾರೆ. ಅವುಗಳಿಗೆ ರಸಗೊಬ್ಬರ ಮತ್ತು ಜೌಷಧೋಪಚಾರ ಕಾಲಕಾಲಕ್ಕೆ ಮಾಡಬೇಕು. ಒಂದು ವೇಳೆ ಮಾಡದಿದ್ದಲ್ಲಿ ಪಕ್ಕದ ಗದ್ದೆಗಳ ಭತ್ತ ಬೆಳೆ ಹಾಳಾಗುತ್ತದೆ. ಹೀಗಾಗಿ, ಕೆಲ ರೈತರು ಭತ್ತ ಬೆಳೆಯಿಂದ ತೋಟಗಾರಿಕೆ ಬೆಳೆಯತ್ತ ಮುಖ ಮಾಡಿದ್ದಾರೆ ಎನ್ನುತ್ತಾರೆ ಕೃಷಿಕ ಕೃಷ್ಣ ನಾಯ್ಕ.
ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಸಾಕಷ್ಟು ಸಂಖ್ಯೆಯಲ್ಲಿದೆ. ರೈತರು ಕೂಡ ಕೃಷಿ ಚಟುವಟಿಕೆ ಪ್ರಾರಂಭಿಸಲು ಮುಂದಾಗಿದ್ದಾರೆ. ರೈತರಿಗೆ ಅಗತ್ಯ ಸಲಹೆ-ಸೂಚನೆ ನೀಡಲು ಕೃಷಿ ಇಲಾಖೆ ಸನ್ನದ್ಧವಾಗಿದೆ. ನಂದೀಶ ಆರ್., ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿರಸಿ