ಸಮಗ್ರ ಕೃಷಿ ಮಾಡಿ ಆರ್ಥಿಕವಾಗಿ ಸಬಲರಾಗಿ

20 myk 2
Published on

ಮಾಯಕೊಂಡ: ನೀರು ಮತ್ತು ಭೂಮಿಯನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ನೀರಾವರಿ ಪ್ರದೇಶದಲ್ಲಿ ಸಮಗ್ರ ಕೃಷಿ ಮಾಡಿ ಆರ್ಥಿಕವಾಗಿ ಸಬಲರಾಗಬೇಕು ಎಂದು ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ)ಯ ಪ್ರಾಧ್ಯಾಪಕ ಜಿ. ಭೀಮ ನಾಯ್್ಕ ರೈತರಿಗೆ ಸಲಹೆ ನೀಡಿದರು.

ಹೋಬಳಿಯ ಕಂದಗಲ್ಲು ಗ್ರಾಮದಲ್ಲಿ ಬುಧವಾರ ಜಲ ಸಂಪನ್ಮೂಲ ಇಲಾಖೆ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ ಧಾರವಾಡ ಇವರು ಭದ್ರಾ ಅಚ್ಚುಕಟ್ಟು ಪ್ರದೇಶದ ನೀರು ಬಳಕೆದಾರರ ಸಹಕಾರ ಸಂಘಗಳ ಪದಾಧಿಕಾರಿಗಳಿಗೆ ಹಾಗೂ ರೈತರಿಗೆ ಹಮ್ಮಿಕೊಂಡಿದ್ದ ಒಂದು ದಿನದ ಪುನಶ್ಚೇತನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಬೆಳೆಗಳಿಗೆ ನೀರನ್ನು ಅಚ್ಚುಕಟ್ಟಾಗಿ ಬಳಕೆ ಮಾಡಬೇಕು. ಕೃಷಿ ಭೂಮಿಯನ್ನು ಆರೋಗ್ಯಕರವಾಗಿ ನೋಡಿಕೊಳ್ಳುವುದರೊಂದಿಗೆ ಭತ್ತ, ಕಬ್ಬು, ಅಡಕೆಗಳನ್ನಷ್ಟೇ ಬೆಳೆಯದೆ ವಿವಿಧ ರೀತಿಯ ಹೊಸ ಬೆಳೆಗಳನ್ನು ಬೆಳೆಯುವ ಪದ್ಧತಿಯನ್ನು ರೈತರು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ವಾಲ್ಮಿ ಸಂಸ್ಥೆಯು ರಾಜ್ಯಾದ್ಯಂತ ಜಲ ಮತ್ತು ನೆಲ ನಿರ್ವಹಣೆ ಪುನಶ್ಚೇತನ ಕಾರ್ಯಾಗಾರಗಳನ್ನು ಏರ್ಪಡಿಸುವುದರ ಮೂಲಕ ರೈತರಿಗೆ ವಿಶೇಷ ತರಬೇತಿ ನೀಡುತ್ತಿದೆ. ಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಒಟ್ಟು 570 ನೀರು ಬಳಕೆದಾರರ ಸಂಘಗಳಿದ್ದು ದಾವಣಗೆರೆ ಉಪ ವಿಭಾಗದಲ್ಲಿ 65 ರಿಂದ 70 ಸಂಘಗಳಿವೆ. ಈ ಎಲ್ಲ ಸಂಘಗಳ ಪದಾಧಿಕಾರಿಗಳು ಉತ್ತಮ ಕಾರ್ಯ ನಿರ್ವಹಣೆ ಮಾಡಿ ಸಂಘಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದು ಹೇಳಿದರು.

ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ. ರಾಜಶೇಖರ್ ಮಾತನಾಡಿ, ರೈತರು ಕೃಷಿಯಲ್ಲಿ ನೀರು ನಿರ್ವಹಣೆ ಹಾಗೂ ಭೂಮಿಯ ಆರೋಗ್ಯಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಸಾವಯವ ಕೃಷಿ ಮಾಡುವ ಮೂಲಕ ಭೂಮಿಯ ಫಲವತ್ತತೆಯನ್ನು ಹೆಚ್ಚು ಮಾಡಿಕೊಳ್ಳಬೇಕು. ಕೃಷಿ ಭೂಮಿಗೆ ಕಳೆನಾಶಕ ಸಿಂಪಡಣೆ ಮಾಡಬಾರದು. ಅಡಕೆ ಸಿಪ್ಪೆಯಲ್ಲಿ ಉತ್ತಮ ಕಾಂಪೋಸ್ಟ್ ಗೊಬ್ಬರ ತಯಾರು ಮಾಡಿಕೊಳ್ಳಬೇಕು, ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ತಂದು ಕೊಡುವ ಬೆಳೆಗಳನ್ನು ಬೆಳೆಯಬೇಕು ಎಂದರು.

ಮಲಪ್ರಭಾ ಯೋಜನಾ ಮಟ್ಟದ ನೀ.ಬ.ಸ. ಸಂಘಗಳ ಮಹಾಮಂಡಳ ಸಿಇಒ ಜಿ.ಕೆ. ದುಮ್ಮಳ್ಳಿ ಮಾತನಾಡಿ, ನೀರು ಬಳಕೆದಾರರ ಸಹಕಾರ ಸಂಘಗಳನ್ನು ರಚನೆ ಮಾಡಿಕೊಳ್ಳುವ ಮೂಲಕ ರೈತರಿಗೆ ಸಿಗಬಹುದಾದ ವಿವಿಧ ಸವಲತ್ತುಗಳನ್ನು ಪಡೆದುಕೊಳ್ಳಲು ಅನುಕೂಲತೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಯ ನಿವೃತ್ತ ಸಹಪ್ರಾಧ್ಯಾಪಕ ಎನ್. ಹನುಮಂತಪ್ಪ ಮಾತನಾಡಿದರು. ಸಂಯೋಜಕ ಸಹಾಯಕ ಪ್ರಾಧ್ಯಾಪಕ ಚಂದ್ರಪ್ಪ, ಗ್ರಾಮದ ಮುಖಂಡರು, ರೈತರು, ಸಾರ್ವಜನಿಕರು, ನೀರು ಬಳಕೆದಾರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net