ತಾಲೂಕು ಕಚೇರಿ ಮುಂದೆಯೇ ತನ್ನ ಹೊಟ್ಟೆಗೆ ತಾನೇ ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ‌ ರೈತ..!

Farmer
Published on

ಚಿಕ್ಕಬಳ್ಳಾಪುರ: ಪಿತ್ರಾರ್ಜಿತ ಆಸ್ತಿ ಹಂಚಿಕೆಯ ವಿವಾದದ ಹಿನ್ನಲೆಯಲ್ಲಿ ಸೂಕ್ತ ಪರಿಹಾರ ಸಿಗದೇ ರೈತನೊಬ್ಬ ತನ್ನಷ್ಟಕ್ಕೆ ತಾನೇ ಚಾಕುವಿನಿಂದ ತಿವಿದುಕೊಂಡು ಆತ್ಮಹತ್ಯೆಗೆ‌ ಯತ್ನಿಸಿ ಆಸ್ಪತ್ರೆಗೆ ದಾಖಲಾದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ನಗರದಲ್ಲಿ ನಡೆದಿದೆ.

ಚಾಕುವಿನಿಂದ ತಿವಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಜಗನ್ನಾಥ (63) ಎಂಬುವರೇ ಆತ್ಮಹತ್ಯೆಗೆ ಯತ್ನಿಸಿದ ರೈತರಾಗಿದ್ದಾರೆ.

ಗೌರಿಬಿದನೂರು ತಾಲೂಕಿನ ಗಂಗಸಂದ್ರ ಗ್ರಾಮದ ತೋಟದ ಮನೆಯಲ್ಲಿ ಲೇಟ್ ಸಿದ್ದಪ್ಪನವರ ಐದು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯ ಹಂಚಿಕೆಯ ವಿವಾದ ಸುಮಾರು ವರ್ಷಗಳಿಂದ ಸಾಕಷ್ಟು ತಗಾದೆಗಳಿಂದ ಕೂಡಿತ್ತು. ಆದರೆ, ಅಣ್ಣ-ತಮ್ಮಂದಿರು ಸೇರಿ ಮಾತುಕತೆ ನಡೆಸಿ ಜಮೀನುಗಳ ವಿಭಾಗಗಳನ್ನು ರಿಜಿಸ್ಟರ್ ಮಾಡಿಸಲು ಗೌರಿಬಿದನೂರು ತಾಲೂಕು ಕಚೇರಿಗೆ ಹೋಗಿದ್ದಾರೆ. ಅಲ್ಲಿ ಸೂಕ್ತ ಪರಿಹಾರ ಸಿಗದ ಹಿನ್ನಲೆ ಅಣ್ಣ-ತಮ್ಮಂದಿರಿಗೆ ಮಾತಿಗೆ ಮಾತು ಬೆಳೆದಿದೆ.

ಈ ಸಂದರ್ಭ ಹಿರಿಯ ಅಣ್ಣ ಜಗನ್ನಾಥ್ ತಾಲೂಕು ಕಚೇರಿ ಆವರಣದಲ್ಲೇ ತನ್ನಷ್ಟಕ್ಕೆ ತಾನೇ ಚಾಕುವಿನಿಂದ ತನ್ನ ಹೊಟ್ಟೆಗೆ ತಿವಿದುಕೊಂಡಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ಇನ್ನು ಚಾಕುವಿನಿಂದ ತಿವಿದುಕೊಂಡ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಹೊಟ್ಟೆಯ ನಾಲ್ಕೈದು ಭಾಗಗಳಲ್ಲಿ ಗಂಭೀರ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net