ರಾಸಾಯನಿಕ ಬಳಕೆಯಿಂದ ಮಣ್ಣಿನ ಸತ್ವ ನಾಶ

BIRUR (1)
Published on

ಬೀರೂರು (ಕಡೂರು ತಾಲೂಕು): ರೈತ ಸಾವಯವ ಕೃಷಿಯತ್ತ ಆಸಕ್ತಿ ತೋರದೆ ಮಣ್ಣಿನ ಸತ್ವ ಸಾಯಿಸುತ್ತಿದ್ದಾನೆ. ಮನುಷ್ಯ ಮೃತಪಟ್ಟಾಗ ಮಣ್ಣು ಮಾಡುತ್ತಾರೆ. ಆದರೆ ಮಣ್ಣೇ ಸತ್ತರೆ ಏನಾಗಬಹುದು ಎಂದು ಮೈಸೂರು ಪುರ ಗ್ರಾಮದ ರಾಜ್ಯ ಕೃಷಿ ಪಂಡಿತ ಪುರಸ್ಕೃತ ಸುರೇಶ ದೇವಾಂಗ ಪ್ರಶ್ನಿಸಿದರು.

ಗುರುವಾರ ದೇವಾಂಗ ಸಂಘದಿಂದ ನೆಹರೂ ನಗರ ಬಡಾವಣೆ ಶ್ರೀ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಬನದ ಹುಣ್ಣಿಮೆ ಮತ್ತು 7ನೇ ವರ್ಷದ ಅನ್ನದಾಸೋಹ ಕಾರ್ಯಕ್ರಮದಲ್ಲಿ ‘ದೇವರ ದಾಸಿಮಯ್ಯ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ದುಡಿಮೆಯನ್ನು ಅರಸಿ ದೇಶ, ವಿದೇಶಗಳನ್ನು ಸುತ್ತಿ ಬಂದರೂ ನಮ್ಮ ಮಣ್ಣಿನ ಮೇಲಿನ ಪ್ರೀತಿ ಕುಂದಿಲ್ಲ. ಎಷ್ಟೇ ವಿದ್ಯಾಭ್ಯಾಸ ಪಡೆದರೂ ನಾನು ಆಸಕ್ತಿ ತೋರಿದ್ದು ಕೃಷಿ ಕ್ಷೇತ್ರದಲ್ಲಿ ಮಾತ್ರ. 6 ಎಕರೆ ಜಮೀನಿನಲ್ಲಿ 13 ವಿವಿಧ ಬೆಳೆ ಬೆಳೆಯುವ ಸಾವಯವ ಕೃಷಿ ಪದ್ಧತಿ ಅನುಸರಿಸಿ ಸಾಧನೆ ಮಾಡಿದ್ದೇನೆ ಎಂದರು.

ಆಹಾರವನ್ನು ಯಾವುದೇ ಕಂಪ್ಯೂಟರ್​ನಿಂದಾಗಲಿ, ಮಷಿನ್​ನಿಂದಾಗಲಿ ತಯಾರು ಮಾಡಲು ಸಾಧ್ಯವಿಲ್ಲ. ಅದು ಭೂಮಿಯಿಂದ ಬೆಳೆಯಲು ಮಾತ್ರ ಸಾಧ್ಯ. ಅಂಥ ಭೂಮಿಗೆ ರಾಸಾಯನಿಕ ಗೊಬ್ಬರ, ಕಳೆನಾಶಕದಂತಹ ವಿಷ ಬೆರೆಸಿ ಮಣ್ಣನ್ನು ಸಾಯಿಸುವುದಲ್ಲದೆ ಅದರಿಂದ ಬೆಳೆದ ತರಕಾರಿ, ಆಹಾರ ಧಾನ್ಯಗಳಲ್ಲಿಯೂ ವಿಷ ಸೇರಿ ಕಲುಷಿತ ಆಹಾರದಿಂದ ನಮ್ಮ ಆರೋಗ್ಯ ಹದಗೆಡುತ್ತಿದೆ. ಹಾಗಾಗಿ ಆರೋಗ್ಯಪೂರ್ಣ ಆಹಾರ ಬೆಳೆಯುವ ಪದ್ಧತಿ ಅನುಸರಿಸುವುದು ಉತ್ತಮ ಎಂದು ಹೇಳಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ರಂಭಾಪುರಿ ಶಾಖಾ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮಿ ಆಶೀರ್ವಚನ ನೀಡಿ, ಸಂಪತ್ತು ಗಳಿಸುವುದು ಮುಖ್ಯವಲ್ಲ. ಗಳಿಸಿದ್ದರಲ್ಲಿ ಸ್ವಲ್ಪವಾದರೂ ದಾನ ಧರ್ಮಗಳಿಗೆ ವ್ಯಯಿಸಿದರೆ ಸಾರ್ಥಕವಾಗುತ್ತದೆ ಎಂದರು.

ಪುರಸಭೆ ಅಧ್ಯಕ್ಷ ಎಂ.ಪಿ.ಸುದರ್ಶನ್ ಮಾತನಾಡಿ, ದೇವಾಂಗ ಸಮಾಜದ ಅಭಿವೃದ್ಧಿ ಮತ್ತು ಶ್ರೇಯಸ್ಸಿಗೆ ಸದಾ ಜತೆಯಾಗಿರುತ್ತೇನೆ. ದೇವಾಂಗ ಸಮಾಜದ ದೇವಾಲಯ ನಿರ್ವಣಕ್ಕೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.

ಪುರಸಭೆ ಮಾಜಿ ಅಧ್ಯಕ್ಷೆ ಸವಿತಾ ರಮೇಶ್ ಮಾತನಾಡಿ, ಜ್ಞಾನದಾಸೋಹದ ಜತೆಗೆ ಅನ್ನದಾಸೋಹ ಏರ್ಪಡಿಸಿ ಸಮಾಜದ ಪ್ರತಿಭೆಗಳನ್ನು ಗುರುತಿಸುವ ಈ ಕಾರ್ಯಕ್ರಮ ಶ್ಲಾಘನೀಯ. ನೂತನ ದೇವಾಲಯ ನಿರ್ವಣಕ್ಕೆ ನಾವೆಲ್ಲರೂ ಸಹಕರಿಸುತ್ತೇವೆ ಎಂದರು.

ನೌಕರರ ಸಂಘದ ಅಧ್ಯಕ್ಷ ಸುರೇಶ್ ಬಾಬು ಮಾತನಾಡಿ, ಮುಂಬರುವ ದಿನಗಳಲ್ಲಿ ಸಂಘ ದೇವಾಂಗ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಶಾಶ್ವತ ದಾಸೋಹ ನಿಧಿ ಸ್ಥಾಪಿಸುವ ಆಶಯ ಹೊಂದಿದ್ದು ಅದಕ್ಕೆ ಕೈಜೋಡಿಸಬೇಕೆಂದು ಕೋರಿದರು.

ಬೀರೂರು ಪುರಸಭೆ ಮತ್ತು ವಿವಿಧ ಗ್ರಾಪಂಗಳ ದೇವಾಂಗ ಸಮಾಜದ ಸದಸ್ಯರನ್ನು, ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.

ದೇವಾಂಗ ಸಮಾಜದ ಅಧ್ಯಕ್ಷ ಬಿ.ಕೆ.ಲೋಕೇಶ್, ಪುರಸಭೆ ಸದಸ್ಯೆ ಸಹನಾ, ಸಾಕಮ್ಮ, ಬಿ.ಕೆ.ಶಶಿಧರ್, ರವೀಂದ್ರ, ತಿಪ್ಪೇಶ್, ಶಿವಮೂರ್ತಿ, ಮಂಜುನಾಥ್, ಲೋಕೇಶಪ್ಪ, ಜೆಡಿಎಸ್ ಮುಖಂಡ ಬಾವಿಮನೆ ಮಧು, ಗಂಗಾಧರಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net