

ಮಂಡ್ಯ: ತಾಲೂಕಿನ ಬಿಳಿದೇಗಲು ಗ್ರಾಮದಲ್ಲಿ ಸಾಲಬಾಧೆ ತಾಳಲಾರದೇ ರೈತ ನೇಣಿಗೆ ಶರಣಾಗಿದ್ದಾರೆ.
ಗ್ರಾಮದ ಬಿ.ಸಿ.ಸ್ವಾಮಿ(49) ಮೃತ ದುರ್ದೈವಿ. ಇವರು ಜಮೀನಿನಲ್ಲಿ ಕಬ್ಬು ಬೆಳೆ ಬೆಳೆದಿದ್ದರು. ಆದರೆ ನೀರಿಲ್ಲದೆ ಬೆಳೆ ಸಂಪೂರ್ಣ ಒಣಗಿ ಹೋಗಿತ್ತು. ಅಂತೆಯೇ ಬ್ಯಾಂಕ್‌ನಲ್ಲಿ ಮೂರು ಲಕ್ಷ ರೂ ಸಾಲ ಮಾಡಿ ಟ್ರಾೃಕ್ಟರ್ ತೆಗೆದುಕೊಂಡಿದ್ದರು. ಆದರೆ ಇದು ಹಳೆಯದಾದ ಹಿನ್ನೆಲೆಯಲ್ಲಿ ಖಾಸಗಿ ಫೈನಾನ್ಸ್‌ನಲ್ಲಿ ಏಳು ಲಕ್ಷ ರೂ ಸಾಲ ಮಾಡಿ ಮತ್ತೊಂದು ಟ್ರಾೃಕ್ಟರ್ ಖರೀದಿ ಮಾಡಲಾಗಿತ್ತು.
ಈ ನಡುವೆ ಇತ್ತೀಚೆಗೆ ಆಲೆಮನೆ ಕೂಡ ಬೆಂಕಿಗಾಹುತಿಯಾಗಿ ನಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಜೀವನ ನಡೆಸಲು ಕೈಸಾಲ ಮಾಡಿದ್ದರು. ಜತೆಗೆ ಜಮೀನನ್ನು ಕ್ರಯ ಮಾಡಿಸಿ ಸಾಲ ಪಡೆಯಲಾಗಿತ್ತು. ಒಟ್ಟಾರೆ ಸುಮಾರು 20 ಲಕ್ಷ ರೂ ಸಾಲವಿತ್ತು. ಇದರಿಂದಾಗಿ ಮನನೊಂದಿದ್ದ ಬಿ.ಸಿ.ಸ್ವಾಮಿ ಅವರು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತನ ಮಗ ದರ್ಶನ್ ಕೆರಗೋಡು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.