

ರಾಣೆಬೆನ್ನೂರ: ರಾಜ್ಯ ಸರ್ಕಾರ ಬರ ಘೋಷಣೆ ಮಾಡಿದ ದಿನವೇ ಸಾಲಬಾಧೆಯಿಂದ ಬೇಸತ್ತು ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹೊಸ ಹುಲಿಹಳ್ಳಿ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ.
ಗ್ರಾಮದ ರಾಮಪ್ಪ ದುರ್ಗಪ್ಪ ಹುಚ್ಚಣ್ಣವರ (58) ಮೃತ ರೈತ.
ಇವರು ಕೃಷಿಗಾಗಿ ಬ್ಯಾಂಕ್‌ನಲ್ಲಿ 2 ಲಕ್ಷ ರೂ. ಹಾಗೂ ಕೈಗಡವಾಗಿಯೂ ಸಾಲ ಮಾಡಿಕೊಂಡಿದ್ದರು. ಜಮೀನಿನಲ್ಲಿ ಬಿತ್ತನೆ ಮಾಡಿದ್ದ ಮೆಕ್ಕೆಜೋಳ ಬೆಳೆ ಒಣಗಿ ಹಾಳಾಗಿತ್ತು. ಇದರಿಂದಾಗಿ ಸಾಲ ತೀರಿಸುವುದು ಹೇಗೆ ಎಂಬ ಚಿಂತೆಯಿಂದ ಜಮೀನಿನಲ್ಲಿಯೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೈತರಿಂದ ಪ್ರತಿಭಟನೆ…
ಮೃತ ರೈತನ ಶವವನ್ನು ನಗರದಲ್ಲಿಟ್ಟು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನೇತೃತ್ವ ವಹಿಸಿದ್ದ ರೈತ ಮುಖಂಡ ಹನುಮಂತಪ್ಪ ಕಬ್ಬಾರ ಮಾತನಾಡಿ, ಸರ್ಕಾರ ಬರಘೋಷಣೆ ತಡ ಮಾಡಿದ್ದರಿಂದ ರೈತರು ಮತ್ತೆ ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಇದೀಗ ಬರ ಘೋಷಣೆ ಮಾಡಿರುವ ರಾಜ್ಯ ಸರ್ಕಾರ ಬೆಳೆಹಾನಿಯಾದ ರೈತರಿಗೆ ಕೂಡಲೇ ಪರಿಹಾರ ನೀಡಬೇಕು. ಮೃತ ರೈತರ ಕುಟುಂಬಗಳಿಗೆ ಕೂಡಲೇ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ಚಂದ್ರಶೇಖರ ತಿಮ್ಮೇನಹಳ್ಳಿ, ಹನುಮಂತಪ್ಪ ಪರಸಳ್ಳೇರ, ಮಂಜಪ್ಪ ಎ.ಬಿ., ನಾಗರಾಜ ಬಣಕಾರ, ಪ್ರಭು ಹುಚ್ಚಣ್ಣನವರ, ಕರಿಯಪ್ಪ ಬಾರ್ಕಿ, ನಾಗರಾಜ ಡಂಬರ, ಪಕ್ಕೀರಪ್ಪ ಚಂಪಿ, ಬಸಪ್ಪ ಚಳ್ಳಣ್ಣನವರ, ಹನುಮಂತಪ್ಪ ನೆಗಳೂರ, ಕರಿಯಪ್ಪ ಆಡವರ, ರಮೇಶ ಮಲ್ಲೂರ, ರವಿ ಹುಚ್ಚಣ್ಣನವರ ಹಾಗೂ ಮೃತನ ಕುಟುಂಬಸ್ಥರು, ಮತ್ತಿತರರು ಪಾಲ್ಗೊಂಡಿದ್ದರು.