7 ವರ್ಷಗಳಲ್ಲಿ 45 ರೈತರ ಆತ್ಮಹತ್ಯೆ

farmer suicide
Published on

ಮಡಿಕೇರಿ:

ರೈತರ ಆತ್ಮಹತ್ಯೆ ಪ್ರಕಣಗಳಿಗೆ ಕಡಿವಾಣ ಹಾಕಲು ಸರ್ಕಾರ ಸಾಕಷ್ಟು ಕ್ರಮಗಳನ್ನು ತೆಗದುಕೊಂಡಿದ್ದು ಪ್ರಾಣ ಕಳೆದುಕೊಳ್ಳುತ್ತಿರುವ ಅನ್ನದಾತರ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಇಳಿಕೆ ಆಗುತ್ತಿದೆ. ಸರ್ಕಾರದ ಯೋಜನೆಗಳು ಪರಿಣಾಮಕಾರಿ ಫಲಾನುಭವಿಗಳಿಗೆ ತಲುಪುವುದರೊಂದಿಗೆ ಭ್ರಷ್ಟ ವ್ಯವಸ್ಥೆ ಹತೋಟಿಗೆ ಬಂದರೆ ಈ ವಿಷಯದಲ್ಲಿ ಶೂನ್ಯ ಸಾಧನೆ ಮಾಡಬಹುದಾಗಿದೆ. ಕೊಡಗಿನಲ್ಲಿ ಕಳೆದ 7 ವರ್ಷಗಳಲ್ಲಿ ಒಟ್ಟು 45 ರೈತ ಆತ್ಮಹತ್ಯೆ ಪ್ರಕರಣಗಳು ವರದಿ ಆಗಿದೆ.

ಪ್ರಜ್ಞಾವಂತರನ್ನು ಚಿಂತೆಗೀಡು ಮಾಡುವ ಸಮಸ್ಯೆಗಳಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಕೂಡ ಒಂದು. ದೇಶಕ್ಕೆ ಅನ್ನಕೊಡುವ ಅನ್ನದಾತನೇ ಆತ್ಮಹತ್ಯೆಗೆ ಶರಣಾಗುತ್ತಾನೆ ಎಂದರೆ ಅದರ ಹಿಂದೆ ಇರಬಹುದಾದ ಕಾರಣಗಳು ಮತ್ತು ಇದಕ್ಕೆ ಪರಿಹಾರ ಒದಗಿಸುವ ಬಗ್ಗೆ ಎಲ್ಲರೂ ಚಿಂತಿಸಲೇಬೇಕಾದ ಅಗತ್ಯ ಇದೆ. ರೈತರ ಆತ್ಮಹತ್ಯೆ ಕುರಿತು ಅಧ್ಯಯನ ನಡೆಸಲು ಸರ್ಕಾರ 2001ರಲ್ಲಿ ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯ ನಿವೃತ್ತ ಕುಲಪತಿ ಡಾ. ಜಿ.ಕೆ. ವೀರೇಶ್ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿತ್ತು. ರೈತರ ಆರ್ಥಿಕ ಪರಿಸ್ಥಿತಿ, ಸಾಮಾಜಿಕ ಮತ್ತು ಸಾಂಸಾರಿಕ ಸಮಸ್ಯೆಗಳು, ಸಾಮರ್ಥ್ಯಕ್ಕೆ ಮೀರಿ ಸಾಲ, ಬೆಳೆ ನಷ್ಟ ಮತ್ತಿತರ ವಿಷಯಗಳು ರೈತರ ಆತ್ಮಹತ್ಯೆಗೆ ಕಾರಣಗಳಾಗಿರುತ್ತದೆ ಎಂದು ಈ ಸಮಿತಿ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿತ್ತು.

ಸರ್ಕಾರ ಕೂಡ ರೈತರ ಆತ್ಮಹತ್ಯೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದೆ. ರೈತರ ಶ್ರೇಯೋಭಿವೃದ್ಧಿಗಾಗಿ ಮತ್ತು ಅವರಲ್ಲಿ ಆತ್ಮಸ್ಥೆರ್ಯ ತುಂಬಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆದರೂ ಈ ವಿಷಯದಲ್ಲಿ ಶೂನ್ಯ ಸಾಧನೆ ಮಾಡಲು ಇನ್ನೂ ಸಾಧ್ಯವಾಗಿಲ್ಲ. ಪ್ರತಿ ವರ್ಷವೂ ರೈತರ ಆತ್ಮಹತ್ಯೆ ಪ್ರಕರಣಗಳು ವರದಿ ಆಗುತ್ತಲೇ ಇರುತ್ತದೆ. ಕೊಡಗಿನಲ್ಲಿ ಕಳೆದ 7 ವರ್ಷಗಳಲ್ಲಿ 45 ಅನ್ನದಾತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2018-19ರಲ್ಲಿ 12 ರೈತ ಆತ್ಮಹತ್ಯೆ ಪ್ರಕರಣಗಳು ಕೊಡಗಿನಲ್ಲಿ ನಡೆದಿದ್ದವು. ನಂತರದ ವರ್ಷಗಳಲ್ಲಿ ಈ ಪ್ರಮಾಣ ಇಳಿಕೆ ಆಗುತ್ತಾ ಬಂದಿರುವುದು ಸಮಾಧಾನದ ವಿಷಯವಾಗಿದೆ.

2019-20ರಲ್ಲಿ 9, 2020-21ರಲ್ಲಿ 9, 2021-22ರಲ್ಲಿ 5, 2022-23ರಲ್ಲಿ 1, 2023-24ರಲ್ಲಿ 5 ಹಾಗೂ 2024-25ರಲ್ಲಿ 4 ರೈತ ಆತ್ಮಹತ್ಯೆ ಪ್ರಕರಣಗಳು ಕೊಡಗಿನಲ್ಲಿ ವರದಿಯಾಗಿದೆ. ಈ ಪೈಕಿ ಕೆಲವು ಪ್ರಕರಣಗಳನ್ನು ಪರಿಶೀಲಿಸಿದ ಸಂದರ್ಭ ಸರ್ಕಾರದ ಮಾನದಂಡ ಪ್ರಕಾರ ರೈತ ಆತ್ಮಹತ್ಯೆ ಅಲ್ಲ ಎನ್ನುವ ವರದಿಯೂ ಇದೆ. ಹಾಗಾಗಿ ಇದರಲ್ಲಿ ಸರ್ಕಾರದಿಂದ ಅಧಿಕೃತವಾಗಿ 'ರೈತ ಆತ್ಮಹತ್ಯೆ ಪ್ರಕರಣ' ಎಂದು ದಾಖಲಾದ ಪ್ರಕರಣಗಳಿಗೆ ಮಾತ್ರ ಪರಿಹಾರ ಸಿಕ್ಕಿದೆ. 2023-24ರಲ್ಲಿ ವರದಿಯಾದ ಎಲ್ಲಾ 5 ರೈತ ಆತ್ಮಹತ್ಯೆ ಪ್ರಕರಣಗಳಿಗೂ ಸರ್ಕಾರದಿಂದ ಪರಿಹಾರ ಬಂದಿದೆ. 2024-25ರಲ್ಲಿ ನಡೆದ 4 ರೈತ ಆತ್ಮಹತ್ಯೆ ಪ್ರಕರಣಗಳ ಪೈಕಿ 3 ಪ್ರಕರಣದಲ್ಲಿ ಪರಿಹಾರ ಸಿಕ್ಕಿದ್ದು, ಇನ್ನು ಒಂದು ಪ್ರಕರಣದಲ್ಲಿ ಪರಿಹಾರ ಸಿಗಲು ಬಾಕಿ ಉಳಿದುಕೊಂಡಿದೆ.

ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಸರ್ಕಾರ ಪರಿಹಾರ ಮಾತ್ರ ಕೊಡುತ್ತಿಲ್ಲ. ಅವಲಂಬಿತರಿಗೆ ಪಿಂಚಣಿ ವ್ಯವಸ್ಥೆಯೂ ಇದೆ. ಆದರೆ ಈ ಸಮಸ್ಯೆ ತಡೆಗಟ್ಟಲು ಪರಿಹಾರ ಅಥವಾ ಪಿಂಚಣಿ ಶಾಶ್ವತ ಪರಿಹಾರ ಆಗುವುದಿಲ್ಲ. ಇದರ ಬದಲಿಗೆ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎನ್ನುವ ತಜ್ಞರ ಸಲಹೆಯಂತೆ ಸರ್ಕಾರ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ. ಸಮಧಾನಕರ ವಿಷಯ ಎಂದರೆ ಇತ್ತೀಚಿನ ವರ್ಷಗಳಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಇಳಿಮುಖ ಆಗುತ್ತಿದೆ.

ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಸಹಕಾರಿ ಬ್ಯಾಂಕ್‌ಗಳಿAದ ಸಾಲ, ಆಗಾಗ್ಗೆ ಉತ್ತಮ ಮಳೆಯಾಗಿ ವ್ಯವಸಾಯಕ್ಕೆ ಒಳ್ಳೆಯ ವಾತಾವರಣ ನಿರ್ಮಾಣ, ವ್ಯವಾಸಾಯೋತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ, ಬೆಳೆ ನಷ್ಟವಾದ ಸಂದರ್ಭ ಕೈ ಹಿಡಿಯುವ ಬೆಳೆ ವಿಮೆ, ಬೆಳೆ ನಷ್ಟದ ಸಂದರ್ಭ ಸರ್ಕಾರಿದಂ ಸಕಾಲದಲ್ಲಿ ಪರಿಹಾರ ವಿತರಣೆ, ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡುತ್ತಿರುವ ಕೃಷಿ ಸಮ್ಮಾನ್ ನಿಧಿ, ಉತ್ತಮ ಮಾರುಕಟ್ಟೆ ವ್ಯವಸ್ಥೆ ನಿರ್ಮಾಣ ಹೀಗೆ ಹಲವು ಕಾರಣಗಳಿಂದಾಗಿ ರೈತರ ಜೀವನ ಸುಧಾರಿಸುತ್ತಿದ್ದು ಆತ್ಮಹತ್ಯೆ ಪ್ರಕರಣಗಳು ಇಳಕೆ ಕಾಣುವಲ್ಲಿ ತಮ್ಮದೇ ಆದ ಕೊಡುಗೆ ನೀಡಿವೆ.

ಸಂಕಷ್ಟದ ಸಂದರ್ಭಗಳಲ್ಲಿ ರೈತರಿಗೆ ಕೂಡಲೇ ನೆನಪಾಗುವುದು ಸ್ಥಳೀಯ ಸಾಲಗಾರರು. ಹಾಗಾಗಿ ಇಂಥ ಸ್ಥಳೀಯ ಸಾಲಗಾರರಿಂದ ರೈತರು ಹೆಚ್ಚು ಶೋಷಣೆಗೆ ಒಳಗಾಗುತ್ತಾರೆ. ಇಂಥ ಶೋಷಣೆ ತಡೆಯುವ ಸಲುವಾಗಿ ಉಸ್ತುವಾರಿ ಮತ್ತು ನಿಗಾ ವಹಿಸಲು ಜಿಲ್ಲಾ ಮಟ್ಟದಲ್ಲಿ, ಉಪವಿಭಾಗ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿ ಕಂದಾಯ, ಪೊಲೀಸ್, ಕೃಷಿ, ತೋಟಗಾರಿಕೆ, ಸಹಕಾರ, ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು ಸದಸ್ಯರಾಗಿದ್ದು, ದುಬಾರಿ ಬಡ್ಡಿ ಸೇರಿದಂತೆ ಶೋಷಣೆಗೆ ಒಳಗಾಗುವ ರೈತರ ರಕ್ಷಣೆಗೆ ಈ ಸಮಿತಿ ಸದಾ ಬದ್ಧವಾಗಿರುತ್ತದೆ. ಈ ಕ್ರಮ ಕೂಡ ರೈತರ ಮನೋಸ್ಥೆöÊರ್ಯ ಹೆಚ್ಚಿಸಲು ಸಹಕಾರಿ ಆಗಿದೆ.

ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಯೋಜನೆ, ಪ್ರೋತ್ಸಾಹ ಧನ ನಿಗದಿ, ರೈತರ ಸಾಲಗಳಿಗೆ ಸಹಾಯಧನ, ಕೃಷಿ ಯಾಂತ್ರೀಕರಣ ಯೋಜನೆಗಳಲ್ಲಿ ಸಬ್ಸಿಡಿ, ಕೃಷಿ ಯಂತ್ರಗಳನ್ನು ಬಾಡಿಗೆಗೆ ಕೊಡಲು ಕೃಷಿ ಯಂತ್ರಧಾರ ಕೇಂದ್ರಗಳ ಸ್ಥಾಪನೆ, ಕೃಷಿಕರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಕೃಷಿ ಅಭಿಯಾನ ಯೋಜನೆ, ಸಾವಯವ ಕೃಷಿ ನೀತಿ, ಮುಖ್ಯಮಂತ್ರಿ ವಿದ್ಯಾನಿಧಿ ಯೋಜನೆ ಅಡಿಯಲ್ಲಿ ಕೃಷಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ.. ಹೀಗೆ ರೈತರಿಗೆ ಧೈರ್ಯ ತುಂಬಲು ಹಲವು ಯೋಜನೆಗಳನ್ನು ಸರ್ಕಾರ ರೂಪಿಸಿದೆ. ಇವುಗಳು ಮತ್ತಷ್ಟು ಪರಿಣಾಮಕಾರಿಯಾಗಿ ಫಲಾನುಭವಿಗಳಿಗೆ ತಲುಪಿದರೆ ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಶೂನ್ಯ ಸಾಧನೆಯ ದಿನ ದೂರವಿಲ್ಲ ಎನ್ನುವುದು ಪ್ರಜ್ಞಾವಂತರ ಮಾತು.

ರೈತರ ಆತ್ಮಹತ್ಯೆ ಎನ್ನುವುದನ್ನು ಕಲ್ಪಿಸಿಕೊಳ್ಳಲು ಕೂಡ ಆಗದ ವಿಷಯ. ದೇಶಕ್ಕೆ ಅನ್ನಕೊಡುವವನೇ ಹೀಗೆ ಅಸಹಾಯಕನಾಗಿ ಪ್ರಾಣ ಕಳೆದುಕೊಳ್ಳುತ್ತಾನೆ ಎಂದರೆ ಈ ಸಮಸ್ಯೆಗೆ ಯಾರು ಕಾರಣ ಎನ್ನುವುದು ಕೂಡ ಚಿಂತಿಸಬೇಕಾಗುತ್ತದೆ. ಸರ್ಕಾರ ಎಷ್ಟೇ ಯೋಜನೆಗಳನ್ನು ಪ್ರಕಟಿಸಿದರೂ ರೈತ ತಾನು ಬೆಳೆದ ಉತ್ಪನ್ನಕ್ಕೆ ತಾನೇ ಬೆಲೆ ನಿಗದಿ ಮಾಡುವ ವ್ಯವಸ್ಥೆ ಬರುವ ತನಕ ಈ ಸಮಸ್ಯೆಗೆ ಶಾಶ್ವತ ಪರಿಹಾರ ನಿರೀಕ್ಷೆ ಮಾಡುವುದು ತಪ್ಪಾಗುತ್ತದೆ. ಕಠಿಣ ಪರಿಶ್ರಮಿ ರೈತ ಪರಿಸ್ಥಿತಿ ಎದುರಿಸುವ ಮನೋಸ್ಥೆöÊರ್ಯ ಬೆಳೆಸಿಕೊಳ್ಳಬೇಕು.

ಎನ್.ಕೆ. ಮೋಹನ್ ಕುಮಾರ್, ಸಂಚಾಲಕ, ಆಹಾರ ಉಳಿಸಿ ಅಭಿಯಾನ

ರೈತರ ಆತ್ಮಹತ್ಯೆ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ರೈತರ ಶ್ರೇಯೋಭಿವೃದ್ಧಿಗಾಗಿ ಮತ್ತು ಅವರಲ್ಲಿ ಆತ್ಮಸ್ಥೆರ್ಯ ತುಂಬಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗೂ ಸಹ ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿರುವುದು ಕಳವಳಕಾರಿಯಾಗಿದೆ. ರೈತರ ಆತ್ಮಹತ್ಯೆ ತಡೆಯಲು ಸ್ಥಳೀಯ ಸಾಲಗಾರರಿಂದ ರೈತರ ಶೋಷಣೆ ತಡೆಯುವುದು ಸೇರಿದಂತೆ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ.

ಕೃಷ್ಣ ಬೈರೇಗೌಡ, ಕಂದಾಯ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net