

ಹನಗೋಡು: ಸಮೀಪದ ಹರೀನಹಳ್ಳಿಯಲ್ಲಿ ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದ ರೈತ ಮಂಗಳವಾರ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹರೀನಹಳ್ಳಿಯ ದಿ.ಸೋಮಶೇಖರ್ ಅವರ ಪುತ್ರ ಗುರು(41)ಆತ್ಮಹತ್ಯೆ ಮಾಡಿಕೊಂಡವರು. ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಇವರ ಕುಟುಂಬಕ್ಕೆ ಎರಡು ಎಕರೆ ಭೂಮಿ ಇದ್ದು, ವ್ಯವಸಾಯಕ್ಕಾಗಿ ಪಂಚವಳ್ಳಿಯ ಐಒಬಿ ಬ್ಯಾಂಕಿನಲ್ಲಿ 5 ಲಕ್ಷ, ಧರ್ಮಸ್ಥಳ ಸಂಸ್ಥೆ ವತಿಯಿಂದ 3 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಸಾಲ ತೀರಿಸಲು ಸಾಧ್ಯವಾಗದೆ ಮನೆಯಲ್ಲಿ ಪರಿತಪಿಸುತ್ತಾ ನಾನು ಸಾಯುತ್ತೇನೆಂದು ಆಗಾಗ್ಗೆ ಹೇಳುತ್ತಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿಷ ಕುಡಿದು ಸಾವನ್ನಪ್ಪಿದ್ದಾರೆಂದು ಪತ್ನಿ ಅಶ್ವಿನಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಸ್ವಗ್ರಾಮದಲ್ಲಿ ಶವಸಂಸ್ಕಾರ ನಡೆಯಿತು. ಈ ಸಂಬಂಧ ಪ್ರಕರಣ ದಾಖಲಾಗಿದೆ.