

ಕಿಕ್ಕೇರಿ: ಹೋಬಳಿಯ ಕೋಡಿಮಾರನಹಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ಜಮೀನು ವಿವಾದದಿಂದ ಮನನೊಂದ ರೈತ ನೇಣಿಗೆ ಶರಣಾಗಿದ್ದಾರೆ.
ಗ್ರಾಮದ ಪುಟ್ಟೇಗೌಡರ ಮಗ ಕಾಳೇಗೌಡ(65) ಮೃತ. ಇವರ ಕುಟುಂಬದಲ್ಲಿ ಜಮೀನು ವಿಚಾರವಾಗಿ ಕಳೆದ ವಾರ ಗಲಾಟೆ ನಡೆದಿತ್ತು. ವಿವಾದ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಕಾಳೇಗೌಡ ತನ್ನ ಜಮೀನಿಗೆ ನೀರು ಹಾಯಿಸಲು ಹೋಗಿದ್ದಾಗ ಅದೇ ಗ್ರಾಮದ ಈತನ ಸಂಬಂಧಿಗಳಾದ ಜಗದೀಶ್, ರಂಗೇಗೌಡ, ಶಿವಮ್ಮ, ಪೂರ್ಣಿಮಾ, ಪ್ರೀತಂ ಅವರು ಮಚ್ಚು, ದೊಣ್ಣೆ, ಕಲ್ಲಿನಿಂದ ಹಲ್ಲೆ ಮಾಡಿ ಬೆದರಿಸಿದ್ದಾರೆ.
ಇದರಿಂದ ಮನನೊಂದು ತಮ್ಮ ಮನೆಯ ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ಸಾವಿಗೀಡಾಗಿದ್ದಾರೆ. ಮೃತನ ಪುತ್ರಿ ಕೆ.ಕೆ.ರೂಪಾ ಕಿಕ್ಕೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿ ಜಗದೀಶ್, ಪೂರ್ಣಿಮಾ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.