

ಚಳ್ಳಕೆರೆ: ತಾಲೂಕಿನ ಕುರುಡಿಹಳ್ಳಿ ಗ್ರಾಮದ ರೈತರ ಜಮೀನುಗಳಿಗೆ ತೆರಳಲು ಜಮೀನುದಾರರು ದಾರಿ ಬಿಡುತ್ತಿಲ್ಲ. ಹೀಗಾಗಿ ಕೃಷಿ ಚಟುವಟಿಕೆಗಳಿಗೆ ಅಡ್ಡಿ ಉಂಟಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡರು.
ಗ್ರಾಮಕ್ಕೆ ಸೇರಿರುವ ಬಡ ರೈತರ ಜಮೀನುಗಳಿಗೆ ಕಂದಾಯ ದಾಖಲೆ ಪ್ರಕಾರ ದಾರಿ ಇದೆ.
ಜಮೀನುಗಳ ಮಧ್ಯದಲ್ಲಿ ಭೂಮಿ ಖರೀದಿ ಮಾಡಿರುವವರು ರಸ್ತೆಗೆ ದಾರಿ ಬಿಡದೆ ಒತ್ತುವರಿ ಮಾಡುತ್ತಿದ್ದಾರೆ. ತಾಲೂಕು ಆಡಳಿತಕ್ಕ ಹಲವು ಬಾರಿ ಮನವಿ ಸಲ್ಲಿಸಲಾಗಿದೆ.
ಸರ್ವೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಮಾಡಿ ಹಳೆಯ ದಾರಿಗೆ ತೊಂದರೆ ಮಾಡದಂತೆ ತಿಳಿಸಲಾಗಿತ್ತು. ಆದರೂ, ಇಲಾಖೆ ಅಧಿಕಾರಿಗಳ ಸೂಚನೆಯನ್ನು ಧಿಕ್ಕರಿಸಿ ರೈತರ ಓಡಾಟ ಮತ್ತು ಗಾಡಿ ಸಂಚಾರಕ್ಕೆ ಅಡ್ಡಿಪಡಿಸಲಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರೈತರ ಸಮಸ್ಯೆ ಬಗೆಹರಿಸಬೇಕು ಎಂದು ಗ್ರಾಮದ ರೈತರಾದ ಡಿ. ಹನುಮಪ್ಪ, ಎಸ್.ಚಂದ್ರಪ್ಪ, ಸಣ್ಣದುರುಗಪ್ಪ, ಎ.ಟಿ.ಶ್ರೀನಿವಾಸ್, ದೊಡ್ಡಹನುಮಪ್ಪ ಆಗ್ರಹಿಸಿದ್ದಾರೆ.