

ಸಿಂಧನೂರು: ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಆರಂಭಿಸಿರುವ ಜೋಳ ಖರೀದಿ ಕೇಂದ್ರಗಳನ್ನು ನೋಂದಣಿಗೆ ಮಾತ್ರ ಸೀಮಿತಗೊಳಿಸಿದೆ. ಈವರೆಗೆ ಒಂದು ಚೀಲ ಜೋಳ ಸಹ ಖರೀದಿ ಮಾಡಿಲ್ಲ. ಹೀಗಾಗಿ ರೈತರು ಧಾನ್ಯ ರಕ್ಷಣೆ ಮಾಡಲು ಹೈರಾಣಾಗುತ್ತಿದ್ದಾರೆ.
ಇದನ್ನೂ ಓದಿ: ರಾಜೋಳೆ ಹೋರಾಟಕ್ಕೆ ಬೆಂಬಲ
ತಾಲೂಕಿನ ನೀರಾವರಿ ಹಾಗೂ ಟೇಲೆಂಡ್ ಭಾಗದಲ್ಲಿ ಮುಂಗಾರು-ಹಿಂಗಾರಿನಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಜೋಳ ಬೆಳೆಯಲಾಗಿದೆ. ಕಳೆದ ಎರಡು ವರ್ಷದಿಂದ ಜೋಳ ಖರೀದಿಯಲ್ಲಿ ಆಗುತ್ತಿದ್ದ ಗೋಲ್‌ಮಾಲ್‌ನಿಂದಾಗಿ ಅರ್ಹ ರೈತರು ಖರೀದಿ ಕೇಂದ್ರ ಲಾಭ ಪಡೆಯಲಿಲ್ಲ. ಪ್ರಭಾವಿಗಳೇ ಅಕ್ಕಪಕ್ಕದ ಪಹಣಿಗಳನ್ನು ಪಡೆದು ಕಡಿಮೆ ಬೆಲೆಗೆ ಜೋಳ ಖರೀದಿಸಿ, ಹೆಚ್ಚಿನ ಬೆಲೆಗೆ ಕೇಂದ್ರಕ್ಕೆ ಮಾರುತ್ತಿದ್ದರು.
ಪ್ರಸಕ್ತ ವರ್ಷದಲ್ಲಿ ಅದಕ್ಕೆ ಅವಕಾಶ ನೀಡಿಲ್ಲ. ಆದರೆ, ಸರ್ಕಾರ ವಿಳಂಬವಾಗಿ ಖರೀದಿ ಕೇಂದ್ರ ತೆರೆದಿದ್ದು, ಈಗಾಗಲೇ ಜೋಳದ ಬೆಳೆ ಬಂದು ತಿಂಗಳು ಕಳೆದಿದ್ದರೂ ನೋಂದಣಿ ಪ್ರಕ್ರಿಯೆಯಲ್ಲಿಯೇ ಕಾಲಹರಣ ಮಾಡುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ, ನೂರಾರು ಕ್ವಿಂಟಾಲ್ ಜೋಳ ಸಂಗ್ರಹಿಸಿಟ್ಟುಕೊಳ್ಳುವುದೇ ದೊಡ್ಡ ಸವಾಲಾಗಿದೆ.
ಅಲಬನೂರು, ಮಾಡಸಿರವಾರ, ಗೋಮರ್ಸಿ, ಬೆಳಗುರ್ಕಿ, ರಾಗಲಪರ್ವಿ, ಬಾದರ್ಲಿ ವಲ್ಕಂದಿನ್ನಿ ಸೇರಿ ವಿವಿಧ ಕಡೆ ರೈತರು ದೇವಸ್ಥಾನ, ಮುಖ್ಯಹೆದ್ದಾರಿ, ಖಾಸಗಿ ಗೋದಾಮು, ಮನೆ ಮುಂದೆ ಅನಿವಾರ್ಯವಾಗಿ ಜೋಳ ಸಂಗ್ರಹಿಸಿಟ್ಟುಕೊಂಡಿದ್ದು, ರಕ್ಷಣೆ ಕಷ್ಟವಾಗಿದೆ.
ವಿಳಂಬಕ್ಕೆ ಕಾರಣವೇನು ?: ಸರ್ಕಾರ ಜೋಳ, ತೊಗರಿ ಖರೀದಿಗೆ ಬೆಂಬಲ ಬೆಲೆ ಘೋಷಿಸಿ, ಖರೀದಿ ಕೇಂದ್ರ ಆರಂಭಿಸಿದೆ. ಆದರೆ, ತಿಂಗಳ ಪರ್ಯಂತ ನೋಂದಣಿ ಕಾರ್ಯದಲ್ಲಿಯೇ ಕಾಲಹರಣ ಮಾಡುತ್ತಿದೆ. ಈವರೆಗೆ ತಾಲೂಕಿನಲ್ಲಿ ಅಂದಾಜು 11ಸಾವಿರ ರೈತರು ಜೋಳ ಖರೀದಿಗೆ ನೋಂದಣಿ ಮಾಡಿಕೊಂಡಿದ್ದು 4.90 ಲಕ್ಷ ಕ್ವಿಂಟಾಲ್ ಜೋಳ ಖರೀದಿ ಮಾಡಬೇಕಿದೆ. ಪ್ರಕ್ರಿಯೆ ಇನ್ನೂ ಆರಂಭಿಸಿಲ್ಲ. ಬೀದಿಗಿಳಿದು ಹೋರಾಟ ಮಾಡಿದರೂ ಸರ್ಕಾರ ಸ್ಪಂದಿಸುತ್ತಿರುವುದು ರೈತರು, ರೈತ ಪರ ಸಂಘಟನೆಗಳ ಕೆಂಗೆಣ್ಣಿಗೆ ಗುರಿಯಾಗಿದೆ. ಸರ್ಕಾರ ತೆರೆದಿರುವ ಖರೀದಿ ಕೇಂದ್ರದಲ್ಲಿ ಜೋಳ ಖರೀದಿಸಲು ಖಾಲಿ ಚೀಲಗಳ ಸಮಸ್ಯೆ ಹೆಚ್ಚಿದೆ ಎನ್ನಲಾಗುತ್ತಿದೆ. ಈ ಹಿಂದೆ ಪ್ರಭಾವಿಗಳೇ ಖಾಲಿ ಚೀಲಗಳನ್ನು ಸಂಗ್ರಹಿಸಿಕೊಂಡಿದ್ದರು. ಈಗ ಆ ಪ್ರಕ್ರಿಯೆ ಇಲ್ಲ. ಆದರೂ, ಖಾಲಿ ಚೀಲಗಳು ಸಿಗುತ್ತಿಲ್ಲ. ಜತೆಗೆ ಲಾರಿಗಳ ಸಮಸ್ಯೆಯೂ ಇದೆ. ಬೇರೆ ಭಾಗದಿಂದ ಲಾರಿ ತರಿಸಿಕೊಂಡು ಖರೀದಿ ಆರಂಭಿಸಲು ಸರ್ಕಾರ ಮುಂದಾಗುತ್ತಿಲ್ಲ. ರೈತರ ಉತ್ಪನ್ನಗಳನ್ನು ಖರೀದಿ ಮಾಡಲು ಸರ್ಕಾರ ಹಿಂದೇಟು ಹಾಕುತ್ತಿದೆ. ಒಟ್ಟಿನಲ್ಲಿ ರೈತರು ಬೆಳೆದ ಜೋಳ, ತೊಗರಿ ಖರೀದಿಗೆ ಮುಂದಾಗದಿರುವುದು ಸಂಕಷ್ಟಕ್ಕೀಡು ಮಾಡಿದೆ. ಸಾಲ ಮಾಡಿದವರು ಗೋಳಾಡುವಂತಾಗಿದೆ.ಖಾಲಿ ಚೀಲ, ಲಾರಿ ಸಮಸ್ಯೆ
ರೈತ, ಅಲಬನೂರು
ಆರ್.ಬಸವರಾಜ
ಜೋಳ ಬೆಳೆ ಬಂದು ಈಗಾಗಲೇ ತಿಂಗಳು ಗತಿಸಿದೆ. ಈವರೆಗೆ ಕೇವಲ ನೋಂದಣಿ ಮಾಡಿಕೊಳ್ಳಲಾಗಿದೆ. ಖರೀದಿ ಇಲ್ಲ. ಇದರಿಂದ ರೈತರಿಗೆ ಹೆಚ್ಚಿನ ತೊಂದರೆಯಾಗಿದೆ. ಸಂಗ್ರಹ ಮಾಡಿಟ್ಟುಕೊಳ್ಳುವುದು ಕಷ್ಟವಾಗಿದೆ. ಅಕಾಲಿಕ ಮಳೆ ಬಂದರೆ ರೈತರ ಬದುಕು ಮುರಾಬಟ್ಟೆಯಾಗಲಿದೆ. ರೈತರ ಬಗ್ಗೆ ಕಾಳಜಿ ಇದ್ದರೆ ಸರ್ಕಾರ ಕೂಡಲೇ ಜೋಳ ಖರೀದಿ ಪ್ರಕ್ರಿಯೆ ಆರಂಭಿಸಬೇಕು.
ತಹಸೀಲ್ದಾರ್ ಸಿಂಧನೂರು.ಅರುಣ್ ದೇಸಾಯಿಈಗಾಗಲೇ ಜೋಳ ಖರೀದಿ ನೋಂದಣಿ ನಡೆದಿದೆ. ಖರೀದಿ ಪ್ರಕ್ರಿಯೆಯೂ ಶೀಘ್ರವೇ ಆರಂಭಗೊಳ್ಳಲಿದೆ. ಎಲ್ಲವೂ ಪಾರದರ್ಶಕವಾಗಿ ನಡೆಯಬೇಕಿರುವುದರಿಂದ ವಿಳಂಬವಾಗಿದೆ. ಈಗಾಗಲೇ ಖಾಲಿ ಚೀಲಗಳು ಕೆಲವು ಕಡೆ ಬಂದಿವೆ. ಆದಷ್ಟು ಬೇಗ ಖರೀದಿ ಪ್ರಕ್ರಿಯೆ ನಡೆದು, ರೈತರಿಗೆ ಅನುಕೂಲವಾಗಲಿದೆ.