

ಮಸ್ಕಿ: ಕೃಷಿ ಚಟುವಟಿಕೆ ಅನುಕೂಲಕ್ಕಾಗಿ ದಿನಕ್ಕೆ ಹತ್ತು ಗಂಟೆ 3 ಪೇಸ್ ವಿದ್ಯುತ್ ಪೂರೈಸಬೇಕೆಂದು ಆಗ್ರಹಿಸಿ ಜೆಸ್ಕಾಂ ಎಇಇ ಕೆಂಚಪ್ಪ ಭಾವಿಮನಿಗೆ ರೈತರು ಬುಧವಾರ ಮನವಿ ಸಲ್ಲಿಸಿದರು. ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಹನುಮಂತಪ್ಪ ಮುದ್ದಾಪುರ ಮಾತನಾಡಿ, ರಾಜ್ಯ ಸರ್ಕಾರ ಈಗಾಗಲೇ ರೈತರ ಪಂಪ್‌ಸೆಟ್‌ಗಳಿಗೆ ದಿನಕ್ಕೆ 10 ತಾಸು 3 ಪೇಸ್ ವಿದ್ಯುತ್ ಪೂರೈಸುವಂತೆ ಆದೇಶ ನೀಡಿದೆ. ಆದರೆ ಕಲಬುರಗಿ ವಿಭಾಗ ಮಟ್ಟದ ಅಧಿಕಾರಿಗಳು ಆದೇಶ ಹೊರಡಿಸದೇ ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂದು ಆರೋಪಿಸಿದರು.
ತಾಲೂಕಿನ ಮುದ್ದಾಪುರ, ತಿಡಿಗೋಳ, ನಿಡಿಗೋಳ, ಕೋಳಬಾಳ, ಗುಂಡಾ, ಮಾಟೂರು, ತುರ್ವಿಹಾಳ, ಬಪ್ಪೂರು ಸೇರಿ ಇನ್ನತರೆ ಹಳ್ಳಿಗಳಲ್ಲಿ ರೈತರು ಹಳ್ಳದ ನೀರಿಗೆ ಭತ್ತ ನಾಟಿ ಮಾಡಿದ್ದಾರೆ. ಆದರೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿರುವುದರಿಂದ ಭತ್ತಕ್ಕೆ ಸರಿಯಾಗಿ ನೀರು ಪೂರೈಕೆಯಾಗದೆ ಒಣಗುತ್ತಿವೆ. ಜೆಸ್ಕಾಂ ಅಧಿಕಾರಿಗಳು ಸರ್ಕಾರದ ಆದೇಶದ ಪ್ರಕಾರ ವಿದ್ಯುತ್ ಪೂರೈಸಬೇಕೆಂದು ಒತ್ತಾಯಿಸಿದರು. ರೈತರಾದ ಮಹಿಬೂಬಸಾಬ್ ಮುದ್ದಾಪುರ, ಕೆ.ಶಂಭನಗೌಡ, ಸೋಮಣ್ಣ, ಅಮರೇಶ, ವಿರುಪಣ್ಣ, ಶಿವನಗೌಡ, ಹುಲುಗಪ್ಪ, ಭೀಮಪ್ಪ, ಬಸವರಾಜ, ಯಂಕಣ್ಣ, ಶೇಖರಪ್ಪ, ಯಂಕೋಬ ಇದ್ದರು.