

ಮಂಡ್ಯ: ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ಕಾನೂನಾತ್ಮಕವಾಗಿ ಖಾತ್ರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಗರದಲ್ಲಿ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ ಕಾರ್ಯಕರ್ತರು, ಕೇಂದ್ರ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಕನಿಷ್ಟ ಶೇ 8.5 ಇಳುವರಿಗೆ ಕಬ್ಬಿನ ಎಫ್‌ಆರ್‌ಪಿ ದರ ನಿಗದಿಪಡಿಸಬೇಕು. ಬರ ಪರಿಹಾರದ ತಾರತಮ್ಯ ಸರಿಪಡಿಸಿ ಎಲ್ಲ ರೈತರಿಗೆ ಪರಿಹಾರ ಪಾವತಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ರೈತ ವಿರೋಧಿ 3 ಕಾಯ್ದೆಗಳನ್ನು ರಾಜ್ಯ ಸರ್ಕಾರ ರದ್ದು ಮಾಡಬೇಕು. ಕಾರ್ಮಿಕ ಕಾಯ್ದೆ ರದ್ದುಗೊಳಿಸಬೇಕು. ಬ್ಯಾಂಕ್ ಮತ್ತು ವಿದ್ಯುತ್ ಹಾಗೂ ಬ್ಯಾಂಕ್‌ಗಳ ಖಾಸಗೀಕರಣ ಕೈಬಿಡಲು ಕೇಂದ್ರ ಸರ್ಕಾರಕ್ಕೆ ಒತ್ತಡ ತರಬೇಕು. ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಬಾಕಿ ಪಾವತಿಸಬೇಕು. ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯುವ ರೈತರಿಗೆ ಅಕ್ರಮ ಸಕ್ರಮ ಪದ್ಧತಿಯನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯ ಜೀವನಾಡಿ ಕೃಷ್ಣರಾಜಸಾಗರ ಸುರಕ್ಷತೆ ಹಿನ್ನೆಲೆಯಲ್ಲಿ ಜಲಾಶಯದ ವ್ಯಾಪ್ತಿಯಲ್ಲಿ ಶಾಶ್ವತವಾಗಿ ಗಣಿಗಾರಿಕೆಯನ್ನು ನಿಷೇಧ ಮಾಡಬೇಕು. ಯಾವುದೇ ಕಾರಣಕ್ಕೂ ಪರೀಕ್ಷಾರ್ಥ ಸ್ಫೋಟ ಮಾಡಬಾರದು. ರೈತರ ಆತ್ಮಹತ್ಯೆ ತಡೆಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ರವಾನಿಸಲಾಯಿತು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಗೋವಿಂದೇಗೌಡ, ಶಿವಳ್ಳಿ ಚಂದ್ರು, ಬೋರಾಪುರ ಶಂಕರಗೌಡ, ಜಿ.ಎಸ್.ಲಿಂಗಪ್ಪಾಜಿ, ಎಸ್.ಕೆ.ರವಿಕುಮಾರ್, ಗೂಳೂರು ರಾಮಕೃಷ್ಣ, ಜವರೇಗೌಡ, ಎಂ.ಎಸ್.ವಿಜಯ್‌ಕುಮಾರ್, ಟಿ.ಎಲ್. ವಿನೋದ್‌ಬಾಬು, ವೈ.ಪಿ.ಮಂಜುನಾಥ್, ಲತಾ ಶಂಕರ್ ಇತರರಿದ್ದರು.