

ಕೋಲಾರ : ಜಿಲ್ಲಾದ್ಯಂತ ಅವೈಜ್ಞಾನಿಕ ಅಂಡರ್‍ಪಾಸ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವುದು ಹಾಗೂ ಕೇರಳ ಮಾದರಿಯಲ್ಲಿ ರೈತರು ಬೆಳೆದ ತರಕಾರಿಗಳಿಗೆ ರಾಜ್ಯದಲ್ಲೂ ಬೆಲೆ ನಿಗದಿಗೆ ಒತ್ತಾಯಿಸಿ ರೈಲ್ವೆ ನಿಲ್ದಾಣಕ್ಕೆ ಗುರುವಾರ ಮುತ್ತಿಗೆ ಹಾಕಿದ ರೈತ ಸಂಘ ಕಾರ್ಯಕರ್ತರನ್ನು ರೈಲ್ವೆ ಪೊಲೀಸರು ತಡೆದಾಗ ತಳ್ಳಾಟ, ನೂಕಲಾಟ ಹಾಗೂ ಮಾತಿನ ಚಕಮಕಿ ನಡೆಯಿತು.
ಪ್ರತಿಭಟನಕಾರರು ಘೋಷಣೆ ಕೂಗುತ್ತಾ ರೈಲು ನಿಲ್ದಾಣಕ್ಕೆ ತರಕಾರಿ ಸಮೇತ ಮುತ್ತಿಗೆ ಹಾಕಲು ಆಗಮಿಸುತ್ತಿದ್ದಂತೆ ಆವರಣದಲ್ಲಿ ರೈಲ್ವೆ ಪೊಲೀಸರು ಬ್ಯಾರಿಕೇಡ್ ಹಾಕಿ ತಡೆ ಒಡ್ಡಿದರು. ಇದರಿಂದ ಆಕ್ರೋಶಗೊಂಡ ಪ್ರತಿಭಟನಕಾರರು ಬ್ಯಾರಿಕೇಡ್‍ಗಳನ್ನು ತಳ್ಳಿಕೊಂಡು ಒಳಪ್ರವೇಶಿಸಲು ಪ್ರಯತ್ನಿಸಿದರು. ಸೂಕ್ತ ಬಂದೋಬಸ್ತ್ ಮಾಡಿದ್ದ ಪೊಲೀಸರು ಅವಕಾಶ ನೀಡಿದ್ದಾಗ ಕೆಲ ಕಾಲ ಪರಸ್ಪರ ತಳ್ಳಾಟ, ನೂಕಲಾಟದ ಜತೆಗೆ ಮಾತಿನ ಚಕಮಕಿ ನಡೆಯಿತು. ನಿಲ್ದಾಣಕ್ಕೆ ಪ್ರವೇಶಿಸಲು ಅವಕಾಶ ಸಿಗದಿದ್ದಾಗ ಆವರಣದ ಹೊರಗಡೆಯೇ ಪ್ರತಿಭಟನೆ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ನೂರಾರು ಕೋಟಿ ಖರ್ಚು ಮಾಡಿ ರೈಲ್ವೆ ಇಲಾಖೆಯಿಂದ ನಿರ್ಮಿಸಿರುವ ಅಂಡರ್‍ಪಾಸ್‍ಗಳು ಅಧಿಕಾರಿಗಳ ಮತ್ತು ಗುತ್ತಿಗೆದಾರರ ಬೇಜವಾಬ್ದಾರಿಯಿಂದಾಗಿ ಅವೈಜ್ಞಾನಿಕವಾಗಿ ನಿರ್ಮಾಣಗೊಂಡು ಮಳೆ ಬಿದ್ದರೆ ಕೆರೆ ಕುಂಟೆಗಳಾಗಿ ಮಾರ್ಪಟ್ಟು ಜನರ ಸಂರ್ಪಕ ಕಡಿತಗೊಳ್ಳುತ್ತಿದೆ.ಸಮಸ್ಯಗೆ ಶಾಶ್ವತ ಪರಿಹಾರ ಕೊಡುವಲ್ಲಿ ಇಲಾಖೆ ಅಧಿಕಾರಿಗಳು ವಿಫಲವಾಗಿದ್ದಾರೆಂದು ಆರೋಪಿಸಿದರು.
ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಮಾತನಾಡಿ,ದೇಶಕ್ಕೆ ಸ್ವಾತಂತ್ರ್ಯ ಬಂದು 7 ದಶಕಗಳು ಕಳೆದರೂ ಕಷ್ಟಾಪಟ್ಟು ಬೆಳೆಯುವ ರೈತರ ಬೆಳೆಗಳಿಗೆ ಬೆಲೆ ನಿಗಧಿ ಮಾಡುವ ಸ್ವಾತಂತ್ರ್ಯ ಬಂದಿಲ್ಲ. ರೈತರ ಮೇಲೆ ಪ್ರಮಾಣ ಮಾಡಿ ಅಧಿಕಾರಕ್ಕೆ ಬರುವ ಸರ್ಕಾರಗಳು ರೈತರ ಹಿತ ಕಾಯುವಲ್ಲಿ ವಿಫಲವಾಗಿವೆ. ರೈತರ ಮೇಲೆ ಕಾಳಜಿ ಇದ್ದರೆ ಕೂಡಲೇ ರಾಜ್ಯ ಸರ್ಕಾರ ಕೇರಳ ಮಾದರಿಯಲ್ಲಿ ಬೆಳೆಗಳಿಗೆ ಬೆಲೆ ನಿಗಧಿ ಮಾಡಬೇಕೆಂದು ಆಗ್ರಹಿಸಿದರು.
ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಶ್ರೀನಿವಾಸಪುರ ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ, ಚಾಂದ್‍ಪಾಷ, ಮಂಗಸಂದ್ರ ತಿಮ್ಮಣ್ಣ, ಜಮೀರ್‍ಪಾಷ,ಶೇಕ್ ಬಾಬಜಾನ್, ಕಿರಣ್, ಜಾವೇದ್, ಜಮೀರ್, ಆಸ್ಸೀಮ್, ಶಮೀರ್, ನಸ್ಸೀಮ್, ಜಾಕೀರ್, ಮಾಲೂರು ಅಧ್ಯಕ್ಷ ವೆಂಕಟೇಶ್, ಬಂಗಾರಪೇಟೆ ಅಧ್ಯಕ್ಷ ಐತಂಡಹಳ್ಳಿ ಮಂಜುನಾಥ, ವರಮಹಾಲಕ್ಷ್ಮೀ, ವಿ.ನಳಿನಿ, ಸುಪ್ರಿಂ ಚಲ, ಸುಬ್ರಮಣಿ,ವಕ್ಕಲೇರಿ ಹನುಮಯ್ಯ ನವೀನ್. ಮಹೇಶ್, ಜಗದೀಶ್, ವೇಣು, ವಿನೋದ್, ಅಂಬರೀಶ್, ಸುನಿಲ್, ಆಶೋಕ್, ಭರತ್, ಸುಬ್ಬು ಹಾಜರಿದ್ದರು.