ಕೇಂದ್ರದ ವಿರುದ್ಧ ಅರಬೆತ್ತಲೆಯಾಗಿ ರಸ್ತೆಗಿಳಿದ ರೈತರು

shanthakumar.
Published on

ಬೆಂಗಳೂರು : ಕೇಂದ್ರದ ಹೊಸ ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ನಡೆಸುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲಿಸಿ ರಾಜ್ಯ ಕಬ್ಬು ಬೆಳೆಗಾರ ಸಂಘದ ರೈತರು 9ನೇ ದಿನ ಅರಬೆತ್ತಲೆ ಧರಣಿ ನಡೆಸಿದರು.ಆನಂದರಾವ್ ಸರ್ಕಲ್‌ನ ಗಾಂಧಿ ಪ್ರತಿಮೆ ಬಳಿ ರಾಜ್ಯ ಕಬ್ಬು ಬೆಳೆಗಾರ ಸಂಘದ ರೈತರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಗುರುವಾರ ಅರೆಬೆತ್ತಲೆ ಪ್ರತಿಭಟನೆ ನಡೆಸಿ ಬಾರುಕೋಲು ಬೀಸುವ ಮೂಲಕ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಕೇಂದ್ರ ಸರ್ಕಾರ ದೆಹಲಿ ರೈತ ಚಳುವಳಿಯನ್ನು ದಿಕ್ಕು ತಪ್ಪಿಸಲು ವಾಮಮಾರ್ಗ ಅನುಸರಿಸುತ್ತಿದೆ. ರೈತರನ್ನು ಬೀದಿಗೆ ತಳ್ಳಿ ರೈತ ದಿನಾಚರಣೆ ಮಾಡುವುದು ಕೇಂದ್ರ ಸರ್ಕಾರಕ್ಕೆ ಶೋಭೆಯಲ್ಲ. ಸುಗ್ರಿವಾಜ್ಞೆ ತಂದಿರುವ ಕಾಯ್ದೆಗಳಿಂದ ರೈತರಿಗೆ ಮಾರಕ ಎಂದು ಬಿಜೆಪಿ ಸಹ ಸಂಘಟನೆ ಭಾರತೀಯ ಕಿಸಾನ್ ಸಂಘ ಮತ್ತು ಸ್ವದೇಶಿ ಜಾಗರಣ ಮಂಚ್ ಬಹಿರಂಗ ಹೇಳಿಕೆ ನೀಡಿ ಧರಣಿಗೆ ಬಂದಿದೆ. ಆದರೂ ಕೇಂದ್ರದ ಮಂತ್ರಿಗಳು ಕಾಯ್ದೆಗಳು ರೈತರಿಗೆ ಹೆಚ್ಚಿನ ಅನುಕೂಲ ಎಂದು ಬಿಂಬಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಪೊರೇಟ್ ಕಂಪನಿಗಳ ಮರ್ಜಿಯಲ್ಲಿ ಕಾನೂನುಗಳು ರಚನೆಯಾಗುತ್ತಿವೆ. ಸರ್ಕಾರಗಳು ಕಾಯ್ದೆ ಜಾರಿ ಮಾಡುವ ಕೆಲಸ ಮಾತ್ರ ಮಾಡುತ್ತಿದೆ. ದುಡಿಯುವ ವರ್ಗ ಕೂಲಿ ಕಾರ್ಮಿಕರು ರೈತರು, ಕಾರ್ಖಾನೆ ಕಾರ್ಮಿಕರುಗಳನ್ನು ಕಂಪನಿಗಳ ಗುಲಾಮರಾಗಿ ಮಾಡಲು ಇಂತ ಕಾಯ್ದೆಗಳನ್ನು ಜಾರಿಗೆ ತರುತ್ತಿದೆ. ಪ್ರಧಾನಿಯವರು ಕಿಸಾನ್ ಸಮ್ಮಾನ್ ಯೋಜನೆ ಹಣವನ್ನು ಬಜೆಟ್‌ನಲ್ಲಿ ಘೋಷಿಸಿ 3 ಬಾರಿ ಪ್ರಚಾರ ಪಡೆದಿದ್ದಾರೆ. ರೈತರ ಬಗ್ಗೆ ಕಾಳಜಿ ಇದ್ದರೆ ಹೋರಾಟ ನಿರತ ರೈತ ಮುಖಂಡರ ಜತೆ ಪ್ರಧಾನಿ ಮೋದಿ ಮಾತುಕತೆ ನಡೆಸಲಿ ಎಂದು ಒತ್ತಾಯ ಮಾಡಿದರು.

ಕೇಂದ್ರದ ಕಬ್ಬು ಬೆಳೆಗಾರರಿಗೆ 3,500 ಕೋಟಿ ರೂ. ಬಿಡುಗಡೆ ಎಂಬುದು ಸಕ್ಕರೆ ಕಾರ್ಖಾನೆಗಳಿಗೆ ಸಕ್ಕರೆ ರಫ್ತು ಮಾಡಲು ಸಹಾಯಕವಾಗಿದೆ. ರೈತರಿಗಲ್ಲ. ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ಎಂದು ಬಿಂಬಿಸಲಾಗುತ್ತಿದೆ ಎಂದು ಕುರುಬೂರು ಶಾಂತಕುಮಾರ್ ಆರೋಪ ಮಾಡಿದರು. ರೈತ ಹೋರಾಟಕ್ಕೆ ಬೆಂಬಲಿಸಿ ಅಖಿಲ ಭಾರತ ವಕೀಲರ ಸಂಘ 17 ಸಾವಿರ ರೂ. ದೇಣಿಗೆ ನೀಡಿದೆ. ಪ್ರತಿಭಟನೆ ವೇಳೆ ವಿವಿಧ ರೈತ ಸಂಘಟನೆ ಮುಖಂಡರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net