

ವಿಜಯವಾಣಿ ಸುದ್ದಿಜಾಲ ಗದಗ
‘ರೈತರಿಂದ ಕಡಲೆ ಖರೀದಿಸಿ, ಹಣ ಕೊಡದೇ ಸತಾಯಿಸುತ್ತಿರುವವರ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮವಹಿಸಬೇಕು. ಬಾಕಿ ಇರುವ ₹6.50 ಕೋಟಿ ಹಣವನ್ನು ಶೀಘ್ರ ಕೊಡಿಸಬೇಕು. ಇಲ್ಲವಾದಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುವುದು’ ಎಂದು ಮುಂಡರಗಿ ಹಾಗೂ ಗದಗ ತಾಲ್ಲೂಕಿನ ರೈತರು ಸೋಮವಾರ ಜಿಲ್ಲಾಡಳಿತ ಭವನದ ಎದುರು ಬೃಹತ್ ಪ್ರತಿಭಟನೆ ನಡೆಸಿದರು.
ಸೋಮವಾರ ವಿವಿಧ ಗ್ರಾಮಗಳಿಂದ ಬಂದಿದ್ದ 450ಕ್ಕೂ ಹೆಚ್ಚು ರೈತರು ನಗರದ ಚನ್ನಮ್ಮ ವೃತ್ತದ ಬಳಿ ಜಮಾಯಿಸಿದರು. ಅಲ್ಲಿಂದ ಜಿಲ್ಲಡಳಿತ ಭವನದವರೆಗೆ ಪಾದಯಾತ್ರೆಯಲ್ಲಿ ತೆರಳಿದರು. ಅಲ್ಲಿ ಕೆಲ ಹೊತ್ತು ರಸ್ತೆ ತಡೆ ನಡೆಸಿ, ಆಕ್ರೋಶ ಹೊರಹಾಕಿದರು. ಹಣ ಕೊಡಿಸುವಂತೆ ಆಗ್ರಹಿಸಿ ರೈತ ಮಹಿಳೆಯರು ನೆಲದಲ್ಲಿ ಕುಳಿತು ಬಾಯಿ ಬಡಿದುಕೊಂಡರು. ರೈತರು ಅರೆಬೆತ್ತಲೆಯಾಗಿ ಧಿಕ್ಕಾರ ಕೂಗಿದರು. ಗಂಟೆಗೂ ಅಧಿಕ ಸಮಯ ರಸ್ತೆ ತಡೆ ನಡೆಸಿದ್ದರಿಂದ ಪೊಲೀಸರು ವಾಹನಗಳ ಸಂಚಾರಕ್ಕೆ ಬೇರೆ ರಸ್ತೆ ಮಾರ್ಗ ತೋರಿಸಿದರು.
ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ ಸುಂಕದ, ‘ಮಹಿಳಾ ಗುಂಪಿನ ಮೂಲಕ ರೈತರು ಕಡಲೆ ಖರೀದಿಗೆ ನೀಡಿದ್ದಾರೆ. ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರ ಸೂಚನೆಯಂತೆ ಖರೀದಿ ನಡೆದಿದೆ. ಕಡಲೆ ಖರೀದಿಸಿದ ವ್ಯಕ್ತಿ ಒಂಬತ್ತು ತಿಂಗಳಾದರೂ ಹಣ ನೀಡುತ್ತಿಲ್ಲ. ಕಡಲೆ ಖರೀದಿ ವೇಳೆ ಎನ್‌ಆರ್‌ಎಲ್‌ಎಂ ಮನವಿ ಮೇರೆಗೆ ರೈತರನ್ನು ಪರಿಚಯಿಸಲು ಮಧ್ಯಸ್ಥಿಕೆವಹಿಸಿದ್ದ ಸ್ಥಳೀಯ ಮಹಿಳಾ ಸಂಘದ ಸದಸ್ಯರು ಒತ್ತಡಕ್ಕೆ ಸಿಲುಕುವಂತಾಗಿದೆ’ ಎಂದು ತಿಳಿಸಿದರು.
‘ಎನ್‍ಆರ್‌ಎಲ್‌ಎಂ ಜಿಲ್ಲಾ ಪಂಚಾಯಿತಿ ಕಾರ್ಯಕ್ರಮ ವ್ಯವಸ್ಥಾಪಕ ಚಂದ್ರಶೇಖರ ಎಲಿಗಾರ, ಆನಂದ ಬೆಳವಣಿಕಿ ಹಾಗೂ ತಾಲ್ಲೂಕು ತಾಂತ್ರಿಕ ಸಂಯೋಜಕ ಜಗದೀಶ ಕಂಬಾಳಿಮಠ ಎಂಬುವವರು ದಾವಣಗೆರೆಯ ಮಾರುತಿ ಗೌಡ ಎಂಬುವನೊಂದಿಗೆ ಮಧ್ಯಸ್ಥಿಕೆ ವಹಿಸಿ 3,250 ಟನ್ ಕಡಲೆ ಖರೀದಿಸಿದ್ದಾರೆ. ಈ ಪೈಕಿ ₹13 ಕೋಟಿ ಹಣ ಪಾವತಿಸಿದ್ದು, ಇನ್ನೂ ₹6.50 ಕೋಟಿ ಹಣ ರೈತರಿಗೆ ನೀಡುವುದು ಬಾಕಿಯಿದೆ. ಕೂಡಲೇ ಜಿಲ್ಲಾಡಳಿತ ಮಧ್ಯಪ್ರವೇಶಿಸಿ, ರೈತರಿಗೆ ಹಣ ಕೊಡಿಸಬೇಕು’ ಎಂದು ಒತ್ತಾಯಿಸಿದರು.
‘ಕಡಲೆ ಖರೀದಿಸಿದ ವ್ಯಕ್ತಿಯಿಂದ ಸಂಬಂಧಿಸಿದ ರೈತರಿಗೆ ಹಣ ಕೊಡಿಸುವ ಮೂಲಕ ರೈತರಿಗೆ ನ್ಯಾಯ ಒದಗಿಸಿಕೊಡಬೇಕು. ನಮ್ಮ ಬೇಡಿಕೆಗೆ ಜಿಲ್ಲಾಧಿಕಾರಿಗಳು ಸ್ಪಂದಿಸಿ, ಒಂದು ತಿಂಗಳು ಸಮಯಾವಕಾಶ ಕೇಳಿದ್ದಾರೆ. ಮತ್ತೆ ವಿಳಂಬವಾದರೆ ಜಿಲ್ಲಾ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಬೇಕಾಗುತ್ತದೆ’ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ನೂರಾರು ಮಂದಿ ಭಾವಹಿಸಿದ್ದರು. ನಾರಾಯಣ ಬಿರಸಲ, ಎಸ್.ಬಿ.ಮುಲ್ಲಾ, ಸೋಮನಾಥ ಎಸ್. ಲಮಾಣಿ, ಲಕ್ಷ್ಮೀ ಹಿತ್ತಲಮನಿ, ಸರಸ್ವತಿ ದಾಸರ, ಸರಸ್ವತಿ ಬೆಟಗೇರಿ, ಶಿವಪ್ಪ ಮೂಲಿಮನಿ, ವೆಂಕಣ್ಣ ಮಲ್ಲರೆಡ್ಡಿ, ಸೋಮರಡ್ಡಿ ಹೊಸಮನಿ, ಪಂಚಾಕ್ಷರಯ್ಯ ಬೆಟಗೇರಿಮಠ, ಸಿದ್ದಪ್ಪ ಮುಳ್ಳೂರ, ಬಸವರಾಜ ಬಾಳಿಕಾಯಿ, ಮಂಜುನಾಥ ಗೋಡಿ, ವಾಯ್ ಎನ್ ಕೆಂಚನಗೌಡ್ರ, ಆನಂದ ಸಗರ ಇದ್ದರು.
ಬಾಕ್ಸ್:
ಸಾಲಕ್ಕೆ ಪರಿಹಾರ ಜಮೆ- ರೈತರ ಕಿಡಿ
ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಅತಿಯಾದ ಮಳೆಯಿಂದ ಹೆಸರು, ಗೆಜ್ಜೆ ಶೇಂಗಾ ಬೆಳೆ ಹಾನಿಯಾಗಿದೆ. ಆದರೆ, ಬ್ಯಾಂಕ್‍ಗಳಿಂದ ರೈತರು ಪಡೆದ ಬೆಳೆ ಸಾಲ ಮರುಪಾವತಿಸುವಂತೆ ಅಧಿಕಾರಿಗಳು ದಬ್ಬಾಳಿಕೆ ಮಾಡುತ್ತಿದ್ದಾರೆ. ಸರ್ಕಾರದ ಯಾವುದೇ ಪರಿಹಾರ ಅಥವಾ ಇನ್ನಾವುದೋ ಹಣ ರೈತರ ಖಾತೆಗೆ ಜಮಾವಣೆಯಾದರೇ ಆ ಹಣವನ್ನು ‘ತಡೆಹಿಡಿಯುವ’ ಕೆಲಸ ಮಾಡುತ್ತಿದ್ದಾರೆ ಎಂದು ರೈತರು ದೂರಿದರು.
ರೈತರ ಸಾಲಕ್ಕೆ ಯಾವುದೇ ಪರಿಹಾರ ಅಥವಾ ಜಮೆಯಾದ ಇನ್ನಾವುದೇ ಹಣವನ್ನು ತಡೆಹಿಡಿಯದಂತೆ ಜಿಲ್ಲಾಧಿಕಾರಿಗಳು ಬ್ಯಾಂಕ್‍ಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.