

ಚಿತ್ರದುರ್ಗ: ಹೊಸ ದಿಲ್ಲಿಯಲ್ಲಿ ರೈತರ ಮೇಲೆ ನಡೆದಿರುವ ಲಾಠಿ ಪ್ರಹಾರಕ್ಕೆ ನೈತಿಕ ಹೊಣೆ ಹೊತ್ತು ಕ್ಷಮೆಯಾಚಿಸ ಬೇಕೆಂದು ಪ್ರಧಾನಿಯನ್ನು ಒತ್ತಾಯಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಕಾರ‌್ಯಕತರ್ರುಮಂಗಳವಾರ ಡಿಸಿ ಕಚೇರಿ ಎದುರು ಪ್ರತಿಭಟಿಸಿದರು. ರೈತರು,ಕೃಷಿ ಕೂಲಿ ಕಾರ್ಮಿಕರು ಹಲವು ಹಂತದ ಹೋರಾಟಗಳನ್ನು ನಡೆಸಿ ಅಂತಿಮವಾಗಿ ನವೆಂಬರ್ 26ರಿಂದ ದಿಲ್ಲಿ ಚಲೋ ಚಳವಳಿ ಹಮ್ಮಿಕೊಂಡಿದ್ದು, ಈ ಸಂದರ್ಭದಲ್ಲಿ ಲಾಠಿ ಪ್ರಹಾರ,ಜಲಪಿರಂಗಿ ಬಳಸಿ ರೈತರ ಹಕ್ಕನ್ನು ಧಮನಗೊಳಿಸಿದ್ದಾರೆ. ಸಮಸ್ಯೆಗಳಿಗೆ ಪರಿಹಾರ ನೀಡುವ ಬದಲು ಕೇಂದ್ರ ಸರ್ಕಾರ ರೈತರನ್ನು ಹೀನಾಯವಾಗಿ ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಸಂಬಂಧಿತ ಕಾಯ್ದೆಗಳ ತಿದ್ದುಪಡಿ ಹಿಂಪಡೆಯಬೇಕು. ಡಾ.ಎಂ.ಎಸ್.ಸ್ವಾಮಿನಾಥನ್ ವರದಿಯನ್ವಯ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಗೊಳಿಸಬೇಕು. ಎಲ್ಲ ರೈತರು,ಕೃಷಿ ಕಾರ್ಮಿಕರು,ಗ್ರಾಮೀಣ ಬಡವರಿಗೆ ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕ್ ಸಾಲ ಕೊಡಿಸಬೇಕು. ವಿಶೇಷ ಸಂದರ್ಭಗಳಲ್ಲಿ ಸಾಲ ಮನ್ನಾ,ಬಡ್ಡಿ ಮನ್ನಾದಂತಹ ಅಂಶಗಳನ್ನು ಒಳಗೊಂಡ ಋಣ ಮುಕ್ತ ಕಾಯಿದೆ ಜಾರಿಗೊಳಿಸುವಂತೆ ಕೇಂದ್ರವನ್ನು ಒತ್ತಾಯಿಸಿದರು.
ರೈತ ಮುಖಂಡರಾದ ಟಿ.ನುಲೇನೂರು ಶಂಕರಪ್ಪ, ಬಸ್ತಿಹಳ್ಳಿ ಜಿ.ಸುರೇಶ್‌ಬಾಬು, ಧನಂಜಯ ಹಂಪಯ್ಯನಮಾಳಿಗೆ, ಎಸ್.ಪ್ರವೀ ಣ್‌ಕುಮಾರ್,ಬಿ.ಒ.ಶಿವಕುಮಾರ್,ಆರ್.ಚೇತನ್, ಎಂ.ಲಕ್ಷ್ಮೀಕಾಂತ್,ಬಿ.ಟಿ.ಓಬಣ್ಣ,ನಾಗರಾಜ್ ಮುದ್ದಾಪುರ, ತಿಪ್ಪೇಸ್ವಾಮಿ, ಗುರು ಪಾದಪ್ಪ,ಎಐಯುಟಿಯುಸಿ ಎಚ್.ರವಿಕುಮಾರ್, ಟಿ.ಶಫಿವುಲ್ಲಾ,ನಿಂಗರಾಜು ಮತ್ತಿತರರು ಪ್ರತಿಭಟನೆಯಲ್ಲಿದ್ದರು