

ಮುಂಡರಗಿ: ಕೃಷಿ ಭಾಗ್ಯ ರೈತ ಫಲಾನುಭವಿಗಳನ್ನು ಕೇಂದ್ರೀಕರಿಸಿ ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಯಲ್ಲಿನ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು ಅವಕಾಶ ಕಲ್ಪಿಸುವ ಮೂಲಕ ಮಾದರಿ ಸಮೃದ್ಧ ರೈತರನ್ನಾಗಿ ರೂಪಿಸುವುದು ರೈತ ಸಮೃದ್ಧಿ ಯೋಜನೆಯ ಗುರಿಯಾಗಿದೆ ಎಂದು ಕೃಷಿ ಉಪ ನಿರ್ದೇಶಕಿ ಸ್ಪೂರ್ತಿ ಜಿ.ಎಸ್. ಹೇಳಿದರು.
ತಾಲೂಕಿನ ಬೂದಿಹಾಳ ಗ್ರಾಮದ ರೈತ ಶೇಖಪ್ಪ ಲಿಂಗಶೆಟ್ಟರ್ ಜಮೀನಿನಲ್ಲಿ ಕೃಷಿ ಇಲಾಖೆಯಿಂದ 2024-25ನೇ ಸಾಲಿನ ಕರ್ನಾಟಕ ರೈತ ಸಮೃದ್ಧಿ ಯೋಜನೆಯಡಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಮಣ್ಣು ಆರೋಗ್ಯದ ಬಗ್ಗೆ ರೈತರಿಗೆ ಅರಿವು ಮೂಡಿಸುವ ತರಬೇತಿ ಮತ್ತು ಆಹಾರ ಮತ್ತು ಪೌಷ್ಟಿಕ ಭದ್ರತೆ ಯೋಜನೆಯಡಿ ಹಿಂಗಾರು ಹಂಗಾಮಿನ ಜೋಳದ ಬೆಳೆಯ ಕ್ಷೇತ್ರೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ವಿಷಯ ತಜ್ಞ ಮೇಘನಾ ನಾಡಗೇರ ಮಾತನಾಡಿ, ಆಹಾರ ಮತ್ತು ಪೌಷ್ಟಿಕ ಭದ್ರತೆ ಯೋಜನೆ, ಕೇಂದ್ರ ಪುರಸ್ಕೃತ ಯೋಜನೆಯಾಗಿದ್ದು, ಇದರಲ್ಲಿ ಸಸ್ಯ ವರ್ಧನೆಗೆ ಬೇಕಾದ ಪೋಷಕಾಂಶಗಳು, ಕೀಟ ರೋಗಭಾದೆಗೆ ಔಷಧಗಳು, ಬಿತ್ತನೆಗೆ ಸುಧಾರಿತ ತಳಿಯ ಬೀಜಗಳು ರೈತರಿಗೆ ವಿತರಿಸಿ ಪ್ರಾತ್ಯಕ್ಷಿಕೆ ಕೈಗೊಂಡು ಕಾಳು ತುಂಬುವ ಸಮಯದಲ್ಲಿ ಕ್ಷೇತ್ರೋತ್ಸವ ಮಾಡುವ ಮೂಲಕ ತಾಂತ್ರಿಕತೆಗಳ ಅರಿವು ಮೂಡಿಸುವ ಕಾರ್ಯಕ್ರಮ ನಿರಂತರ ಮಾಡುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೃಷಿಕ ಸಮಾಜ ಉಪಾಧ್ಯಕ್ಷ ಸುರೇಶ ಹಲವಾಗಲಿ ಮಾತನಾಡಿ, ಮಣ್ಣು ರೈತನ ಕಣ್ಣು. ಆದ್ದರಿಂದ ಮಣ್ಣಿನ ಆರೋಗ್ಯದ ಬಗ್ಗೆ ರೈತರು ಕಾಳಜಿ ವಹಿಸಬೇಕು ಎಂದರು. ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಬಸವರಾಜ ನಾವಿ, ನವೋದಯ ವಿದ್ಯಾಲಯ ಪ್ರಾಚಾರ್ಯ ಬಸವರಾಜ ಜಿ.ಎಸ್. ಮಾತನಾಡಿದರು.
ಕಾರ್ಯಕ್ರಮದಲ್ಲಿ 2023-24 ಸಾಲಿನ ಆತ್ಮಾ ಯೋಜನೆಯಡಿ ತಾಲೂಕು ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದ ದೇವಪ್ಪ ಕಲಿವಾಳ, ಮಲ್ಲನಗೌಡ ಪಾಟೀಲ, ಗವಿಸಿದ್ದಪ್ಪ ಸಂಜಿವಣ್ಣವರ, ವಿನಾಯಕ ಕಲ್ಲಕುಟಗರ, ಲಕ್ಷ್ಮೀ ಪಾಟೀಲ ಅವರನ್ನು ಸನ್ಮಾನಿಸಲಾಯಿತು.
ಗ್ರಾಪಂ ಸದಸ್ಯ ದೇವೇಂದ್ರಗೌಡ ಪಾಟೀಲ, ಸಹಾಯಕ ಕೃಷಿ ಅಧಿಕಾರಿ ವೀರೇಶ ಸೊಪ್ಪಿನ, ಅಕ್ಕಮಹಾದೇವಿ ಶೆಲವಡಿ, ಬಾಬಜಿ ಹಡಪದ, ನಾಗರಾಜ ಭೋವಿ, ಭರಮಪ್ಪ ಡಂಬಳ, ಪ್ರಗತಿಪರ ರೈತರಾದ ಮುದಕಪ್ಪ ಕುಕನೂರ, ಬಾಳಪ್ಪ ರ್ಯಾವಣಕಿ, ಈರಪ್ಪ ಮೇಟಿ, ಮೈಲಾರಪ್ಪ ಲಿಂಗಶೆಟ್ಟರ್, ಸ್ವ-ಸಹಾಯ ಸಂಘದ ಮಹಿಳೆಯರು, ಕೃಷಿ ಸಖಿಯರು ಉಪಸ್ಥಿತರಿದ್ದರು.
ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುಡದಪ್ಪ ಲಿಂಗಶೆಟ್ಟರ್ ಕಾರ್ಯಕ್ರಮ ನಿರ್ವಹಿಸಿದರು. ಆತ್ಮಾ ಯೋಜನೆಯ ತಾಲೂಕು ತಾಂತ್ರಿಕ ವ್ಯವಸ್ಥಾಪಕ ಗೌರಿಶಂಕರ ಸಜ್ಜನರ ವಂದಿಸಿದರು.