

ದೇವದುರ್ಗ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ವಿರುದ್ಧ ಸಂಘಟಿತ ಹೋರಾಟ ಅಗತ್ಯ. ಇಲ್ಲದಿದ್ದರೆ ಕೃಷಿ ವ್ಯವಸ್ಥೆಗೆ ಗಂಡಾಂತರ ಬರಲಿದೆ ಎಂದು ಅಖಿಲ ಭಾರತ ಕಿಸಾನ್‌ಸಭಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯು.ಜಿ.ಕೃಷ್ಣನ್ ಎಚ್ಚರಿಸಿದರು.
ತಾಲೂಕಿನ ಹೂವಿನಹೆಡಗಿ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಪ್ರಾಂತ ರೈತ ಸಂಘದ ರಾಜ್ಯ ಮಟ್ಟದ ಅಧ್ಯಯನ ಶಿಬಿರದಲ್ಲಿ ಶನಿವಾರ ಮಾತನಾಡಿದರು. ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡುವುದು ಮಾತ್ರವಲ್ಲ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಬೀಜ, ರಸಗೊಬ್ಬರ, ಕ್ರಿಮಿನಾಶಕ ಕಡಿಮೆ ಬೆಲೆಯಲ್ಲಿ ಸಿಗಬೇಕು.
ರೈತರ ಪರವಾದ ಕೃಷಿ ನೀತಿ ಜಾರಿಯಾಗಬೇಕು. ರೈತರು ಬೆಳೆಯುತ್ತಿರುವ ಬೆಳೆಗೆ ಬೆಲೆಯಿಲ್ಲದೇ ವ್ಯವಸಾಯದ ಖರ್ಚು ಹೆಚ್ಚಾಗಿ ಆದಾಯ ಕಡಿಮೆಯಾಗುತ್ತಿದೆ. ಇದರಿಂದ ರೈತರು ಸಾಲದ ಸೂಲಕ್ಕೆ ಗುರಿಯಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದರು.
ಅಧ್ಯಯನ ಶಿಬಿರದ ಸ್ವಾಗತ ಸಮಿತಿ ಅಧ್ಯಕ್ಷ ಬಸನಗೌಡ ದೇಸಾಯಿ ಮಾತನಾಡಿ, 1995-96ರಲ್ಲಿ ದೊಡ್ಡ ಮಟ್ಟದ ಹೋರಾಟ ರೂಪಿಸಿದ ಪರಿಣಾಮ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನಾರಾಯಣಪುರ ಬಲದಂಡೆ ನಾಲೆ ಜಾರಿಗೊಳಿಸಿದರು. ಇದರಿಂದ ಅತ್ಯಂತ ಹಿಂದುಳಿದ ತಾಲೂಕು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ರೈತರ ನಿರಂತರ ಹೋರಾಟವೇ ಇದಕ್ಕೆ ಪ್ರಮುಖ ಕಾರಣ. ನೀರಾವರಿಗೆ ಒಳಪಟ್ಟಿದ್ದರೂ ಕೊನೇ ಭಾಗಕ್ಕೆ ಸಮರ್ಪಕವಾಗಿ ನೀರು ಸಿಗುತ್ತಿಲ್ಲ. ಇದಕ್ಕಾಗಿ ಮತ್ತೊಂದು ಸುತ್ತಿನ ಹೋರಾಟ ಅಗತ್ಯ ಎಂದರು.
ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಗಿರಿಯಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ನರಸಣ್ಣ ನಾಯಕ, ಶಬ್ಬೀರ್, ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ, ಪ್ರಮುಖರಾದ ಚಂದ್ರಶೇಖರ ಬಾಳೆ, ಶರಣಪ್ಪ ಬಳೆ, ವೈ.ರಾಮಣ್ಣ, ನಾಗರಾಳ ಮಲ್ಲಣ್ಣ ಸಾಹು, ಚಂದ್ರಶೇಖರ ಪಾಟೀಲ್ ಜಾಡಲದಿನ್ನಿ, ಶ್ಯಾಮರಾವ್ ಕುಲಕರ್ಣಿ, ಡಾ.ಹನುಮಂತ್ರಾಯ ನಾಡಗೌಡ, ವಿ.ಎಂ.ಮೇಟಿ ವಕೀಲ, ಚಂದಪ್ಪ ಬುದ್ದಿನ್ನಿ, ದೇವೇಂದ್ರ ಹೆಗ್ಗಡೆ, ವೆಂಕಟರಾಯ ಬೆನಕನ, ಶಾಂತರಾಮ ನಾಯಕ ಇದ್ದರು.